Featured StoryNational

ರಾಮ ನವಮಿ ಸಂದರ್ಭ ಹಿಂಸಾಚಾರ ಪ್ರಕರಣ: ಬಿಹಾರದಲ್ಲಿ ನೂರಕ್ಕಿಂತ ಅಧಿಕ ಮಂದಿ ಬಂಧನ

ಬಿಹಾರದಲ್ಲಿ ರಾಮನವಮಿ ವೇಳೆ ಗುರುವಾರ ಆರಂಭವಾದ ಹಿಂಸಾಚಾರ (Ram navami violence) ಭಾನುವಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ರೊಹ್ಟಾಸ್ ಮತ್ತು ನಳಂದಾ ಜಿಲ್ಲೆಗಳಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾದ ಮರುದಿನ ಮತ್ತೆ ಹೊಸ ಘರ್ಷಣೆಗಳು ವರದಿಯಾಗಿವೆ. ಪೊಲೀಸರು ಅನೇಕರನ್ನು ಬಂಧಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಣಕ್ಕೆ ತರಲು ಬಿಹಾರ್ ಷರೀಫ್‌ನಲ್ಲಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿದ್ದಾರೆ.

ಶನಿವಾರ ಸಂಜೆ ಬಿಹಾರ್‌ ಷರೀಫ್‌ನಲ್ಲಿ ಎರಡು ಗುಂಪುಗಳ ನಡುವೆ ಸಂಭವಿಸಿದ ಘರ್ಷಣೆಯಲ್ಲಿ ಒಬ್ಬ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಮುಕೇಶ್ ಕುಮಾರ್ ಎಂಬಾತ ಪಹಾರ್ಪುರ ಪ್ರದೇಶದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ.

ರೊಹ್ಟಾಸ್ ಜಿಲ್ಲೆಯ ಸಸರಾಂ ಪಟ್ಟಣದಲ್ಲಿ ಶನಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಆರು ಮಂದಿಗೆ ಗಾಯಗಳಾಗಿವೆ. ಶನಿವಾರ ಸಂಜೆ ಶೇರ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಎರಡೂ ಪಟ್ಟಣಗಳಲ್ಲಿ ಮನೆಗಳು, ಅಂಗಡಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕೋಮು ಉದ್ವಿಗ್ನತೆ ತೀವ್ರಗೊಂಡಿದ್ದು, ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಬಿಹಾರ್ ಷರೀಫ್ ಮತ್ತು ನಳಂದಾದಲ್ಲಿ ವರದಿಯಾದ ಹೊಸ ಘರ್ಷಣೆಗಳಿಗೆ ಸಂಬಂಧಿಸಿದಂತೆ ಒಟ್ಟು 112 ಮಂದಿಯನ್ನು ಬಂಧಿಸಲಾಗಿದೆ. ರೊಹ್ಟಾಸ್ ಜಿಲ್ಲೆಯಲ್ಲಿ ಏ. 4ರವರೆಗೂ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜತೆಗೆ ಎಲ್ಲ ತರಬೇತಿ ಸಂಸ್ಥೆಗಳನ್ನೂ ಮುಚ್ಚಲಾಗಿದೆ.

ನಳಂದಾದಲ್ಲಿ ರಾಮ ನವಮಿ ಹಬ್ಬದ ವೇಳೆ ಹೊತ್ತಿಕೊಂಡ ಕೋಮು ಗಲಭೆಯ ಬಳಿಕ ಸುಮಾರು 80 ಮಂದಿಯನ್ನು ಬಂಧಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇನ್ನೊಂದೆಡೆ ಈ ಘರ್ಷಣೆಗಳು ಬಿಜೆಪಿ ಹಾಗೂ ಅದರ ಎದುರಾಳಿ ಪಕ್ಷಗಳ ನಡುವೆ ರಾಜಕೀಯ ಸಮರಕ್ಕೆ ಅಸ್ತ್ರವಾಗಿ ಪರಿಣಮಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button