Featured StoryState News

ಅಭ್ಯರ್ಥಿ ಆಯ್ಕೆ ಬಿಜೆಪಿಗೆ ಟಫ್ ಟಾಸ್ಕ್: ಬಣ ರಾಜಕೀಯದ ಆತಂಕದಲ್ಲಿ ಕೇಸರಿ ಪಾಳಯ!

ಬಿಜೆಪಿಗೂ ಟಿಕೆಟ್ ಹಂಚಿಕೆ ಸುಲಭವಿಲ್ಲ. ಏ. 7 ರಂದು ದಿಲ್ಲಿಯಲ್ಲಿ ನಡೆಯುವ ಸಂಸದೀಯ ಮಂಡಳಿ ಸಭೆಯ ಬಳಿಕ ಏ. 8ರಂದು ಮೊದಲ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆಯಿದೆ. ಟಿಕೆಟ್ ಪ್ರಕಟಗೊಂಡ ನಂತರ ಒಂದಿಷ್ಟೂ ಬಂಡಾಯದ ಅಲೆ ಬಿಜೆಪಿ ಎದುರಿಸಬೇಕಾಗಬಹುದು.

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲೇ ನಡೆಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಈಗಾಗಲೇ ಘೋಷಿಸಿದ್ದಾರೆ. ಅದರ ಮಧ್ಯೆಯೇ ಟಿಕೆಟ್‌ ಹಂಚಿಕೆಗೆ ಸಂಬಂಧಪಟ್ಟಂತೆ ಕಾರ್ಯಕರ್ತರ ಅಭಿಪ್ರಾಯಕ್ಕೂ ಮನ್ನಣೆ ನೀಡುವುದಕ್ಕಾಗಿ ನಡೆಸುತ್ತಿರುವ ಜಿಲ್ಲಾ ಕೋರ್‌ ಕಮಿಟಿ ಸಭೆಯ ಸಂಗ್ರಹಣೆ ಮತ್ತೂಂದು ಸುತ್ತಿನ ಗೊಂದಲ ಸೃಷ್ಟಿಸುತ್ತಿದೆ ಎಂಬ ಕೂಗು ಈಗ ಪಕ್ಷದ ಒಳಗಿನಿಂದಲೇ ಕೇಳಿ ಬಂದಿದೆ. ಇದು ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಬಣ ಕಲಹಕ್ಕೆ ಕಾರಣವಾಗಬಹುದೆಂಬ ಕಳವಳ ವ್ಯಕ್ತವಾಗತೊಡಗಿದೆ.

ಟಿಕೆಟ್‌ ಆಯ್ಕೆ ಸಂದರ್ಭ ಈ ಬಾರಿ ತಮ್ಮ ಮಾತೇ ಎಂಬ ನಿರೀಕ್ಷೆಯನ್ನು ಯಡಿಯೂರಪ್ಪ ಹೊಂದಿದ್ದಾರೆ. ಆದರೆ ಬೂತ್‌ ಕಮಿಟಿ, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರ ಸೇರಿದಂತೆ ಪಕ್ಷದ ಸಂಘಟನ ವ್ಯವಸ್ಥೆಯಲ್ಲಿ ಇರುವವರಲ್ಲಿ ಸಂತೋಷ್‌ ಬೆಂಬಲಿಗರು ಮೇಲುಗೈ ಸಾಧಿಸಿದ್ದಾರೆ.

ಹೀಗಾಗಿ ಕಾರ್ಯಕರ್ತರು ನೀಡಿದ ಅಭಿಪ್ರಾಯದ ಆಧಾರದ ಮೇಲೆ ಅಭ್ಯರ್ಥಿ ಆಯ್ಕೆಗೆ ಮುಂದಾದಾಗ ಯಡಿಯೂರಪ್ಪ ಹಾಗೂ ಸಂತೋಷ್‌ ಬಣದ ಮಧ್ಯೆ ಹಿಂದಿನಂತೆ ಸಮಸ್ಯೆ ನಿರ್ಮಾಣವಾಗಬಹುದು ಎಂಬ ಆತಂಕವನ್ನು ಪಕ್ಷದ ಹಿರಿಯರು ವ್ಯಕ್ತಪಡಿಸಿದ್ದಾರೆ.

ಆದರೆ ಜಿಲ್ಲಾವಾರು ಕೋರ್‌ ಕಮಿಟಿಯಿಂದ ಅಭಿಪ್ರಾಯ ಸಂಗ್ರಹಣೆಗೂ ಅಮಿತ್‌ ಶಾ ಅವರಿಂದಲೇ ಹಸಿರು ನಿಶಾನೆ ಲಭಿಸಿದೆ. ಹೀಗಾಗಿ ಬಿಜೆಪಿ ಟಿಕೆಟ್‌ ಹಂಚಿಕೆ ಪ್ರಕ್ರಿಯೆ ಮತ್ತೆ ಗೊಂದಲದ ಗೂಡಾಗಿ ಪರಿಣಮಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button