ಲೋಕಸಭೆ ಚುನಾವಣೆ 2024: ಬಿಜೆಪಿ 8ನೇ ಪಟ್ಟಿ ಬಿಡುಗಡೆ, ನಟ ಸನ್ನಿ ಡಿಯೋಲ್ ಗೆ ಕೊಕ್, ಹಲವು ಅಚ್ಚರಿ ಅಭ್ಯರ್ಥಿಗಳು ಕಣದಲ್ಲಿ!

ನವದೆಹಲಿ: ಲೋಕಸಭೆ ಚುನಾವಣೆ 2024ರ ನಿಮಿತ್ತ ಶನಿವಾರ ಬಿಜೆಪಿ ತನ್ನ ಅಭ್ಯರ್ಥಿಗಳ 8ನೇ ಪಟ್ಟಿ ಬಿಡುಗಡೆ ಮಾಡಿದ್ದು, ಪಟ್ಟಿಯಿಂದ ನಟ ಸನ್ನಿ ಡಿಯೋಲ್ ಹೆಸರನ್ನು ಕೈಬಿಡಲಾಗಿದೆ.

ಬಿಜೆಪಿಯ ಎಂಟನೇ ಪಟ್ಟಿಯಲ್ಲಿ ಹಲವು ಕುತೂಹಲಕಾರಿ ಹೆಸರುಗಳಿದ್ದು, ಮಾಜಿ ರಾಜತಾಂತ್ರಿಕ ಅಧಿಕಾರಿ, ಭಾರತದ ಮಾಜಿ ರಾಯಭಾರಿ ತರಂಜಿತ್ ಸಿಂಗ್ ಸಂಧು ಅಮೃತಸರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಈ ಹಿಂದೆ ಅರುಣ್ ಜೇಟ್ಲಿ ಮತ್ತು ಹರ್ದೀಪ್ ಸಿಂಗ್ ಪುರಿಯಂತಹ ಅನೇಕ ಉನ್ನತ ಬಿಜೆಪಿ ನಾಯಕರೊಂದಿಗೆ ತರಂಜಿತ್ ಸಿಂಗ್ ಸಂಧು ಕೆಲಸ ಮಾಡಿದ್ದರು.

ಅಂತೆಯೇ ಪಂಜಾಬ್ ಮಾಜಿ ಸಿಎಂ ಬಿಯಾಂತ್ ಸಿಂಗ್ ಅವರ ಮೊಮ್ಮಗ ಮತ್ತು ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಇತ್ತೀಚೆಗೆ ಬಿಜೆಪಿ ಸೇರಿದ್ದು, ಇದೀಗ ಅವರಿಗೆ ಲೂಧಿಯಾನದಿಂದ ಟಿಕೆಟ್ ನೀಡಲಾಗಿದೆ. ಅಂತೆಯೇ ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಪಟಿಯಾಲದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಗೆ ಪಕ್ಷಾಂತರ ಮಾಡಿದ್ದ ಎಎಪಿ ಸಂಸದ ಸುಶೀಲ್ ಕುಮಾರ್ ರಿಂಕು ಜಲಂಧರ್‌ನಿಂದ ಕಣಕ್ಕಿಳಿದಿದ್ದಾರೆ. ಅಂತೆಯೇ ರಾಜಕೀಯವಾಗಿ ಸೂಕ್ಷ್ಮವಾಗಿರುವ ಬಿರ್ಭೂಮ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಐಪಿಎಸ್ ಅಧಿಕಾರಿ ದೇಬಶಿಶ್ ಧರ್ ಕಣಕ್ಕಿಳಿದಿದ್ದಾರೆ.

2021 ರ ವಿಧಾನಸಭಾ ಚುನಾವಣೆಯಲ್ಲಿ ಸಿತಾಲ್ಕುಚಿಯ ಮತಗಟ್ಟೆಯ ಮೇಲೆ ಹಿಂಸಾತ್ಮಕ ಗುಂಪು ದಾಳಿಯ ಸಂದರ್ಭದಲ್ಲಿ ನಾಲ್ವರನ್ನು ಕೊಂದ ಸಿಐಎಸ್‌ಎಫ್ ಗುಂಡಿನ ದಾಳಿಯನ್ನು ದೇಬಶಿಶ್ ಧರ್ ಸಮರ್ಥಿಸಿಕೊಂಡಿದ್ದಕ್ಕಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಆಕ್ರೋಶಕ್ಕೆ ತುತ್ತಾಗಿ ಅಮಾನತುಗೊಂಡಿದ್ದರು. ಮಾತ್ರವಲ್ಲದೇ ಧರ್ ಅವರು ಅಕ್ರಮ ಆಸ್ತಿಗಳ ಆರೋಪದ ಮೇಲೆ ರಾಜ್ಯ ಪೊಲೀಸರಿಂದ ತನಿಖೆ ಮತ್ತು ದಾಳಿಗಳನ್ನು ಎದುರಿಸಿದ್ದರು.

ಇತ್ತೀಚೆಗಷ್ಟೇ ಪಕ್ಷ ತೊರೆದಿದ್ದ ಬಿಜೆಡಿ ತೊರೆದು ಬಿಜೆಪಿ ಸೇರಿದ್ದ ಆರು ಬಾರಿ ಸಂಸದ ಭಟ್ರುಹರಿ ಮಹತಾಬ್ ಅವರು ಕಟಕ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ನಟ ಸನ್ನಿ ಡಿಯೋಲ್ ಹೆಸರು ನಾಪತ್ತೆ

ಇನ್ನು ಇಂದಿನ ಪಟ್ಟಿಯಿಂದ ನಟ, ಸಂಸದ ಸನ್ನಿ ಡಿಯೋಲ್ ಹೆಸರನ್ನು ಕೈ ಬಿಡಲಾಗಿದ್ದು, ಸ್ವತಃ ನಟ ಸನ್ನಿ ಡಿಯೋಲ್ ಅವರೇ ಈ ಬಾರಿ ಸ್ಪರ್ಧಿಸದಿರಲು ನಿರ್ಧರಿಸಿದ್ದರಿಂದ ಅವರ ಗುರುದಾಸ್‌ಪುರ ಕ್ಷೇತ್ರದಿಂದ ದಿನೇಶ್ ಸಿಂಗ್ ‘ಬಬ್ಬು’ ಕಣಕ್ಕಿಳಿದಿದ್ದಾರೆ.

Latest Indian news

Popular Stories