Featured StoryState News

ಬಿಜೆಪಿ ಶಾಸಕನ ಪುತ್ರನ ಲಂಚ ಪ್ರಕರಣ: ಕಾಂಗ್ರೆಸ್’ನಿಂದ ಪೋಸ್ಟರ್ ಅಭಿಯಾನ

ಬೆಂಗಳೂರು, ಮಾ.7 : ಟೆಂಡರ್‌ಗಾಗಿ ಲಂಚ ಪಡೆದ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಹೆಸರಿಸಲ್ಪಟ್ಟ ನಂತರ ನಾಪತ್ತೆಯಾಗಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಪಕ್ಷವು ಮಂಗಳವಾರ ಪೋಸ್ಟರ್ ಅಭಿಯಾನವನ್ನು ಪ್ರಾರಂಭಿಸಿದೆ.

ಬೆಂಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ನೂರಾರು ಪೋಸ್ಟರ್‌ಗಳನ್ನು ಯುವ ಕಾಂಗ್ರೆಸ್ ಸದಸ್ಯರು ಅಂಟಿಸಿದ್ದಾರೆ. ಪೋಸ್ಟರ್‌ಗಳಲ್ಲಿ ಆರೋಪಿ ಶಾಸಕನ ದೊಡ್ಡ ಭಾವಚಿತ್ರವಿದೆ ಮತ್ತು “ಕಾಣೆಯಾಗಿದ್ದಾರೆ” ಎಂದು ಬ್ಲಾಕ್ ಅಕ್ಷರಗಳಲ್ಲಿ ಬರೆಯಲಾಗಿದೆ.

ಪೋಸ್ಟರ್‌ನಲ್ಲಿ ಆರೋಪಿ ಶಾಸಕ ಬಿಜೆಪಿ ಚಿಹ್ನೆ ‘ಕಮಲ’ ಟೋಪಿ ಧರಿಸಿರುವುದು ಕಂಡುಬಂದಿದೆ.

“ದಯವಿಟ್ಟು ಲೋಕಾಯುಕ್ತ ತನಿಖೆಯ ಎ-1 ಆರೋಪಿಯನ್ನು ಪತ್ತೆ ಮಾಡಲು ಸಹಾಯ ಮಾಡಿ” ಎಂದು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ‘ಅಸಮರ್ಥ 40% ಸರ್ಕಾರ’ ಎಂದೂ ಬರೆಯಲಾಗಿದೆ. ಪೋಸ್ಟರ್‌ನಲ್ಲಿ ‘ಯಾರಾದರೂ ಕಂಡರೆ ಪೊಲೀಸ್ ಸಹಾಯವಾಣಿ 100 ಗೆ ಕರೆ ಮಾಡಿ’ ಎಂದು ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದೆ.

ದಾವಣಗೆರೆ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಹಾಗೂ ಬೆಂಗಳೂರಿನ ಹಲವೆಡೆ ಪೋಸ್ಟರ್‌ಗಳು ರಾರಾಜಿಸಿದ್ದು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.

ಪ್ರಮುಖ ಆರೋಪಿ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆರು ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಆರೋಪಿ ಶಾಸಕರು ಸಿಎಂ ಕಚೇರಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದಾರೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದು, ಬಿಜೆಪಿ ಶಾಸಕರನ್ನು ಕಂಡು ತಕ್ಷಣ ಪೊಲೀಸರಿಗೆ ಕರೆ ಮಾಡುವಂತೆ ಜನರನ್ನು ಒತ್ತಾಯಿಸಿದರು.

ತೀವ್ರ ಮುಖಭಂಗ ಅನುಭವಿಸಿರುವ ಬಿಜೆಪಿಯ ಕರ್ನಾಟಕ ಘಟಕ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಮೂಲ ದೃಢಪಡಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button