ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾಗಿರುವ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರಿಗೆ ಎಐಸಿಸಿ ಶಿಸ್ತುಸಮಿತಿ ಶೋಕಾಸ್ ನೋಟಿಸ್ ನೀಡಿದೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಖಾಯಂ ಸದಸ್ಯರೂ ಆಗಿರುವ ಬಿ.ಕೆ. ಹರಿಪ್ರಸಾದ್ ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ ಎಂಬ ದೂರನ್ನು ಸ್ವೀಕರಿಸಿದ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾರ್ವಜನಿಕವಾಗಿ ಟೀಕಿಸಿರುವುದರ ಬಗ್ಗೆ 10 ದಿನಗಳ ಒಳಗಾಗಿ ಉತ್ತರ ನೀಡುವಂತೆ ಸೂಚಿಸಲಾಗಿದೆ.
ಕಳೆದ ಶನಿವಾರ ಅರಮನೆ ಮೈದಾನದಲ್ಲಿ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತಿ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ: ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತಾ ಹೇಳಿದರೆ ಆಗುವುದಿಲ್ಲ, ದೇವರಾಜ ಅರಸು ಕಾರಿನಲ್ಲಿ ಕುಳಿತರೆ ದೇವರಾಜ ಅರಸು ಆಗಲ್ಲ. ದೇವರಾಜ ಅರಸು ಚಿಂತನೆ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ಹಿನ್ನೆಲೆಯಲ್ಲಿ ಬಿ.ಕೆ. ಹರಿಪ್ರಸಾದ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮಾಲೂರಿನ ಶಾಸಕ ಕೆ.ವೈ. ನಂಜೇಗೌಡ ಮತ್ತಿತರ ಸಿದ್ದು ಬಣದ ಶಾಸಕರು ಕೆಪಿಸಿಸಿ ಹಾಗೂ ಎಐಸಿಸಿ ಶಿಸ್ತು ಸಮಿತಿಯನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲಿಯೇ ಹರಿಪ್ರಸಾದ್‌ಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೇಳಿಬಂದಿದೆ.