ಇತ್ತೀಚೆಗೆ ಉಡುಪಿ ಬ್ರಹ್ಮಗಿರಿಯ ಆದರ್ಶ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ನಕಲಿ ಚಿನ್ನ ಅಡಮಾನ ಸಾಲದ ಪ್ರಕರಣದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕರ್ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತಂದು ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಬ್ಲಾಕ್ಮೇಲ್ ತಂತ್ರ ಅನುಸರಿಸಿರುವ ಕೃತ್ಯ ಖಂಡನೀಯ ಎಂದು ಉಡುಪಿ ಜಿಲ್ಲಾ ಬಿಜೆಪಿ ತಿಳಿಸಿದೆ.
ಪ್ರಕರಣ ನಡೆದ ಸಂದರ್ಭ ಸೆ.5ರಂದು ದಾವೂದ್ ಅಬೂಬಕರ್ ಉಡುಪಿಯಲ್ಲಿ ಇಲ್ಲದೇ ಇದ್ದರೂ ಅವರ ಹೆಸರನ್ನು ದುರುದ್ದೇಶದಿಂದ ಪೊಲೀಸ್ ದೂರಿನಲ್ಲಿ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ. ದಾವೂದ್ ಅಬೂಬಕರ್ ನ ಹಳೆಯ ಕಾರನ್ನು ಖರೀದಿಸಲು ಆಸಕ್ತಿ ತೋರಿದ್ದ ನಕಲಿ ಚಿನ್ನ ಪ್ರಕರಣದ ಆರೋಪಿ ರಿಯಾಜ್ ನನ್ನು ಶಾಹೀರ್ ಎಂಬ ವಾಹನ ಮಾರಾಟದ ಮಧ್ಯವರ್ತಿ ತನಗೆ ಪರಿಚಯಿಸಿದ್ದು, ರಿಯಾಜ್ ತನ್ನ ಕಾರಿನ ಕೀಯನ್ನು ಮೊದಲೇ ಪಡೆದುಕೊಂಡು ಹೋಗಿದ್ದ ಎಂದು ದಾವೂದ್ ಅಬೂಬಕರ್ ತಿಳಿಸಿದ್ದಾರೆ.
ದಾವೂದ್ ಅಬೂಬಕರ್ ತನ್ನ ಮಗನನ್ನು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸುವ ಸಲುವಾಗಿ ಸೆ.3ರಂದು ಬೆಂಗಳೂರಿಗೆ ತೆರಳಿದ್ದು, ಸೆ.5ರಂದು ಉಡುಪಿಗೆ ವಾಪಾಸು ಬರುವ ಸಂದರ್ಭದಲ್ಲಿ ಮಧ್ಯಾಹ್ನ ಸುಮಾರು 2.45ಕ್ಕೆ ನೆಲಮಂಗಲ ಟೋಲ್ ಗೇಟ್ ದಾಟಿದ್ದು, ಸುಮಾರು 3.15ಕ್ಕೆ ಎಡಿಯೂರು – ಚೆನ್ನರಾಯಪಟ್ಟಣ ರಸ್ತೆಯ ನಡುವಿನ ದಾರಿಯಲ್ಲಿ ಎಂಪಾಯರ್ ಹೋಟೆಲ್ ನಲ್ಲಿ ಊಟ ಮುಗಿಸಿ, ತನ್ನ ಕಾರಿಗೆ ಪೆಟ್ರೋಲ್ ತುಂಬಿಸಿದ ಎಲ್ಲಾ ದಾಖಲೆಗಳು ತನ್ನ ಬಳಿ ಇದೆ ಎಂದಿರುವುದು, ಈ ಪ್ರಕರಣದಲ್ಲಿ ದಾವೂದ್ ಅಬೂಬಕರ್ ರವರನ್ನು ಉದ್ದೇಶಪೂರ್ವಕ ಫಿಕ್ಸ್ ಮಾಡಿ ಅವರ ಹಳೆಯ ಕಾರನ್ನು ಕೂಡಾ ವಾಪಾಸು ನೀಡದೇ ಇರುವುದು ಪೂರ್ವನಿಯೋಜಿತ ಷಡ್ಯಂತ್ರ ಎಂದು ಕಂಡು ಬರುತ್ತದೆ.
ಆದರ್ಶ ಸೊಸೈಟಿಯಲ್ಲಿ ಆರೋಪಿತ ವ್ಯಕ್ತಿ ರಿಯಾಜ್ ಈ ಹಿಂದೆಯೂ ನಕಲಿ ಚಿನ್ನವನ್ನು ಅಡಮಾನ ಇಟ್ಟು ಹಣ ಪಡೆದಿರುವಾಗ ಅದನ್ನು ಗಮನಿಸದೇ ಕರ್ತವ್ಯಲೋಪ ಎಸಗಿರುವ ಸಿಬ್ಬಂದಿ ಅಥವಾ ಇತರ ಜವಾಬ್ದಾರಿಯುತ ವ್ಯಕ್ತಿಗಳು ಈ ಕೃತ್ಯದಲ್ಲಿ ಯಾಕೆ ಶಾಮೀಲಾಗಿರಬಾರದು ಎಂಬ ಶಂಕೆ ಮೂಡುವುದು ಸಹಜ. ಪೊಲೀಸ್ ಇಲಾಖೆಯೂ ಒತ್ತಡ ಮತ್ತು ವಶೀಲಿಗೆ ಒಳಗಾಗಿ ನೈಜ ಆರೋಪಿಯನ್ನು ರಕ್ಷಿಸುವ ಉದ್ದೇಶದಿಂದ ದಾವೂದ್ ಅಬೂಬಕರ್ ಮೇಲೆ ಆಧಾರ ರಹಿತ ಸುಳ್ಳು ಪ್ರಕರಣ ದಾಖಲಿಸಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಕಾಂಗ್ರೆಸ್ ನಾಯಕರ ಈ ನಡೆ ಖಂಡನಾರ್ಹ ಎಂದು ಉಡುಪಿ ಜಿಲ್ಲಾ ಬಿಜೆಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.