ಕಾವೇರಿ ಜಲಾಶಯಗಳಿಂದ ತಮಿಳು ನಾಡಿಗೆ ಪ್ರತಿದಿನವೂ 5000 ಕ್ಯೂಸೆಕ್ ನೀರು ಹರಿಸಬೇಕೆಂಬ ಆದೇಶಕ್ಕೆ ಸುಪ್ರೀಮ್ ಕೋರ್ಟು ತಡೆಯಾಜ್ಞೆ ನೀಡದಿರುವುದರಿಂದ ಕನ್ನಡಿಗರು ಕೆರಳಿ ಬೀದಿಗಿಳಯುವಂತಹಾ ಪರಿಸ್ಥಿತಿ ಉದ್ಭವವಾಗಿದೆ.ರಾಜ್ಯದ ಸ್ಥಿತಿ ಅರ್ಥೈಸಿ ಸುಪ್ರೀಮ್ ಕೋರ್ಟ್ ತಡೆಯಾಜ್ಞೆ ನೀಡಲಿ ಯಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಅಭಿಪ್ರಾಯ ಪಟ್ಟಿದ್ದಾರೆ.
ಸರಕಾರ ಸುಪ್ರೀಮ್ ಕೋರ್ಟಿನ ಆದೇಶ ಪಾಲಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಸುಪ್ರೀಮ್ ಕೋರ್ಟಿಗೆ ನಮ್ಮ ರಾಜ್ಯದ ಸದ್ಯದ ಬರ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡಲು ವಿಫಲವಾಗಿರುವುದೇ ಈ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಮಳೆಯಿಲ್ಲದೆ ನಮ್ಮ ರಾಜ್ಯದ ಪರಿಸ್ಥಿತಿ ತೀರಾ ಕಳವಳಕಾರಿಯಾಗಿರುವಾಗ ಕಾವೇರಿ ಜಲಾಶಯದ ನೀರು ಹರಿಸುವುದರ ವಿರುದ್ದ ಪ್ರತಿಭಟಿಸುವುದರಲ್ಲಿಯೂ ನ್ಯಾಯವಿದೆ. ನಮ್ಮ ಸಂಸದರ ವೈಫಲ್ಯತೆ ಎದ್ದು ಕಾಣುತ್ತಿದೆ. ಕೇಂದ್ರಕ್ಕೆ ವಾಸ್ತವವನ್ನು ಮನವರಿಕೆ ಕೊಡಲು ಬಿಜೆಪಿ ಸಂಸದರು ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲವೆಂಬುದು ಸ್ಪಷ್ಟ. ರಾಜಕೀಯ ಲಾಭಕ್ಕಾಗಿ ಈ ವಿವಾದ ಬಳಸುವುದನ್ನು ಬಿಟ್ಟು ರಾಜ್ಯದ ರೈತರ ಹಿತಾಸಕ್ತಿಗಳ ಕಡೆಗೆ ಗಮನ ಹರಿಸಬೇಕು. ರಾಜ್ಯ ಸರಕಾರದ ಮೇಲೆ ಹರಿಹಾಯುವುದನ್ನು ಬಿಟ್ಟು ಪ್ರಾಮಾಣಿಕವಾಗಿ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಡಬೇಕಾಗಿದೆ. ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ. ಸದ್ಯ ಅದರ ಅಗತ್ಯ ರಾಜ್ಯಕ್ಕಿದೆ. ಕನ್ನಡ ನಾಡಿನ ಜನತೆಯ ಪ್ರತಿಭಟನೆಯ ಕಿಚ್ಚು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಕಣ್ಣು ತೆರೆಸಬೇಕು. ಇನ್ನಾದರೂ ರಾಜ್ಯದ ಹಲವಾರು ಜಿಲ್ಲೆಗಳ ಬರ ಪರಿಸ್ಥಿತಿಯನ್ನು ಸುಪ್ರೀಮ್ ಕೋರ್ಟಿಗೆ ಅರ್ಥೈಸುವ ಕೆಲಸ ನಿರ್ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯೆ ಪ್ರವೇಶಿಸಬೇಕು. ಚುನಾವಣೆಯ ಸಂದರ್ಭದಲ್ಲಿ ನಿರಂತರ ಭೇಟಿ ನೀಡುತ್ತಿದ್ದ ಪ್ರಧಾನಿಗಳು, ಕೇಂದ್ರ ಸಚಿವರು ರಾಜ್ಯಕ್ಕೆ ಬೇಟಿ ನೀಡಿ ರೈತಾಪಿ ಜನರ ಅಹವಾಲು ಆಲಿಸಲಿ. ಪರಿಸ್ಥಿತಿಯನ್ನ ಅರ್ಥೈಸಿ ಪರಿಹಾರಕ್ಕೆ ಮುಂದಾಗಲಿ. ಪ್ರತಿಭಟನೆಯು ಶಾಂತಿಯುತವಾಗಿ ನಡೆಯಲಿ.