ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ್ದು ದೆಹಲಿ ಮೂಲದ ಅಜಯ್ ಮಕೆನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಿದೆ.
ಜಿ.ಸಿ.ಚಂದ್ರಶೇಖರ್ ಮತ್ತು ನಾಸೀರ್ ಹುಸೇನ್ ಗೆ ಮತ್ತೊಮ್ಮೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇನ್ನು ಎಐಸಿಸಿ ಖಜಾಂಚಿಯಾಗಿರುವ ದೆಹಲಿ ಮೂಲದ ಅಜಯ್ ಮಕೆನ್ ಅವರಿಗೆ ಕರ್ನಾಟಕ ರಾಜ್ಯಸಭಾ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.ಇದಕ್ಕೂ ಮುನ್ನ ಬಿಜೆಪಿ ತನ್ನ ಅಭ್ಯರ್ಥಿಯನ್ನಾಗಿ ಬಾಗಲಕೋಟೆ ಮೂಲದ ಸಂಘ ಪರಿವಾರದ ಕಟ್ಟಾಳು ನಾರಾಯಣ ಬಾಂಡಗೆ ಟಿಕೆಟ್ ಘೋಷಿಸಿತ್ತು.
ಫೆಬ್ರವರಿ 15 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು ಈ ಮೂವರು ನಾಯಕರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ. ಅಜಯ್ ಮಾಕೆನ್ ಇಂದು ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು. ನಾಳೆ ಬೆಳಗ್ಗೆ ಅಜಯ್ ಮಕೆನ್, ಜಿಸಿ ಚಂದ್ರಶೇಖರ ಹಾಗೂ ನಾಸಿರ್ ಹುಸೇನ್ ಅವರು ವಿಧಾನಸೌಧದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಈಗಿನ ಸಂಖ್ಯಾಬಲದ ಆಧಾರದ ಮೇಲೆ ನೋಡುವುದಾದರೆ ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಒಬ್ಬರು ನಿರಾಯಾಸವಾಗಿ ಗೆಲ್ಲಬಹುದಾಗಿದೆ.