ಬೆಂಗಳೂರು: ಹಿಂದೂ ಪರ ಸಂಘಟನೆಯ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಉದ್ಯಮಿ ಗೋವಿಂದ್ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ವಂಚನೆ ಎಸಗಿರುವ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪಗಳ ಸುರಿಮಳೆಗೈದಿದೆ.
ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ”ಬಿಜೆಪಿಯಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಸಿಎಂ ಹುದ್ದೆಗೆ 2,500 ಕೋಟಿ,ಮಂತ್ರಿಗಿರಿಗೆ 70 – 80 ಕೋಟಿ,MLA ಟಿಕೆಟ್ ಗೆ 7 ಕೋಟಿ!!. ಇದೆಲ್ಲವೂ ಬಿಜೆಪಿಯವರಿಂದಲೇ ಬಯಲಾದ ಸತ್ಯಗಳು.ಯತ್ನಾಳ್ ಆಣೆಗೂ ಇದನ್ನು ನಾವು ಹೇಳಿದ್ದಲ್ಲ!. ಈ ಮಾರಾಟದ ಆಟದಲ್ಲಿ “ವಿರೋಧ ಪಕ್ಷದ ನಾಯಕ”ನ ಹುದ್ದೆಗೆ ಇನ್ನೂ ಯಾರೊಬ್ಬರೂ ಬಿಡ್ ಸಲ್ಲಿಸಿಲ್ಲವೇ ?” ಎಂದು ವ್ಯಂಗ್ಯವಾಗಿ ಬಿಜೆಪಿಯನ್ನು ಪ್ರಶ್ನಿಸಿದೆ.
”ಬಿಜೆಪಿ ಪಕ್ಷದಲ್ಲಿ ಎಲ್ಲವನ್ನೂ ಮಾರಾಟಕ್ಕೆ ಇಡಲಾಗಿದೆಯೇ? ಟಿಕೆಟ್ ವಂಚನೆಯ ಪ್ರಕರಣದಲ್ಲಿ ಬಿಜೆಪಿಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಪ್ರಮುಖ ಆರೋಪಿ.ಈತನ ವಂಚನೆಯ ಬಗ್ಗೆ ಒಂದು ತಿಂಗಳ ಹಿಂದೆಯೇ ಪಕ್ಷಕ್ಕೆ ದೂರು ಬಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಏಕೆ ?”ಎಂದು ಪ್ರಶ್ನಿಸಿದೆ.
”ವಂಚಕರಿಗೆ, ಭ್ರಷ್ಟರಿಗೆ ಬಿಜೆಪಿ ತವರು ಮನೆಯಾಗಿದೆಯೇ? ಮಾಜಿ ಗೃಹಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ ಆರಗ ಜ್ಞಾನೇಂದ್ರ ಅವರೇ?ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರಾ ಜ್ಞಾನೇಂದ್ರರಿಗೆ ಪರಮಾಪ್ತರು.ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ? ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ?” ಎಂದು ಸರಣಿ ಪ್ರಶ್ನೆಗಳನ್ನು ಕೇಳಿದೆ.