ಬೆಂಗಳೂರು: ವಾಟಾಳ್ ನಾಗರಾಜ್ ವಿಧಾನಸೌಧ ಪ್ರವೇಶಿಸಿ ಹತ್ತಿರ ಎರಡು ದಶಕ ಆಗುತ್ತಿದ್ದರೂ ಅವರ ಬದ್ಧತೆ ಬಗ್ಗೆ ಹಿರಿಯ ರಾಜಕಾರಣಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಟಾಳ್ ನಾಗರಾಜ್ ಅವರ ಬದ್ಧತೆಯನ್ನು ಗುಣಗಾನ ಮಾಡಿದರು.
ಅವರು ಅಧಿವೇಶನದ ಬೆಲ್ ಆಗುತ್ತಿದ್ದಂತೆ ಸದನದ ಒಳಗೆ ಬಂದು ಕೂರುತ್ತಿದ್ದರು. ಅಧಿವೇಶನ ಮುಗಿಯುವವರೆಗೂ ಅಲುಗಾಡದೆ ಕೂರುತ್ತಿದ್ದರು. ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು, ಶಾಂತವೇರಿ ಗೋಪಾಲಗೌಡರನ್ನು ಇವತ್ತಿಗೂ ಇಡೀ ನಾಡು ಯಾಕೆ ಸ್ಮರಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ವಿಧಾನಸಭೆ ಸಂಸದೀಯ ಪ್ರಜಾಪ್ರಭುತ್ವದ ದೇಗುಲ. ಇಲ್ಲಿ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಿ ಪರಿಹಾರ ಪಡೆದುಕೊಳ್ಳುವ ಮನಸ್ಥಿತಿಯನ್ನು ಪ್ರತಿಯೊಬ್ಬ ಶಾಸಕ ಬೆಳೆಸಿಕೊಳ್ಳಬೇಕು. ಯಾರು ಸಂವಿಧಾನವನ್ನು ಓದಿ ಅರ್ಥ ಮಾಡಿಕೊಳ್ಳುವುದಿಲ್ಲವೋ ಅವರು ಉತ್ತಮ ಶಾಸಕರಾಗಲು, ಸಂಸದರಾಗಲು ಸಾಧ್ಯವಿಲ್ಲ. ಆದ್ದರಿಂದ ಮೊದಲು ಸಂವಿಧಾನವನ್ನು ಓದಿ ಅದರ ಮೂಲಭೂತ ತತ್ವ ಮತ್ತು ಉದ್ದೇಶಗಳನ್ನು ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಸದನದ ನಿಯಮಾವಳಿಗಳನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಂಡರೆ ಜನರ ಸಮಸ್ಯೆಗಳನ್ನು ನಿಯಮಬದ್ಧವಾಗಿ ಸದನದ ಮುಂದೆ ಮಂಡಿಸಬಹುದು. ಸಂವಿಧಾನಕ್ಕೆ ವಿರುದ್ಧವಾದ ಕಾನೂನು-ಕಾಯ್ದೆಗಳನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸಂವಿಧಾನದ ಓದು ಅತ್ಯಗತ್ಯ. ಶಾಸಕರು, ಸಂಸದರು ಬಜೆಟ್ ಅಂದರೆ ಏನೆಂದು ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದಲ್ಲಿ ಕಾಯಕಯೋಗಿ ಬಸವಣ್ಣನವರು ಬಜೆಟ್ ಬಗ್ಗೆ ಹೇಳಿದ್ದಾರೆ. ಕಾಯಕ ಅಂದರೆ ಉತ್ಪಾದನೆ, ದಾಸೋಹ ಅಂದರೆ ಹಂಚಿಕೆ. ಬಜೆಟ್ ಅಂದರೆ ಇಷ್ಟೆ, ಎಲ್ಲಿಂದ ಉತ್ಪಾದನೆ ಬರುತ್ತದೆ ಅದನ್ನು ಸಮಾಜದ ಯಾರಿಗೆ ಹಂಚುತ್ತೇವೆ ಎನ್ನುವುದೇ ಬಜೆಟ್ ನ ಮೌಲ್ಯ ಎಂದು ತಿಳಿಸಿದರು.
ನಾನು, ನನ್ನಂಥವರು ಶಾಸಕರಾಗಲು, ಮುಖ್ಯಮಂತ್ರಿ ಆಗಲು ಡಾ.ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ. ಸಂವಿಧಾನ ಇಲ್ಲದಿದ್ದರೆ ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ, ನಾನು ಸಹ ಎಲ್ಲೋ ಕುರಿ, ಹಸು ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ದೇಶದ ಪ್ರತಿಯೊಬ್ಬರು ಸಂವಿಧಾನದ ಮೌಲ್ಯ ಅರಿತುಕೊಳ್ಳಬೇಕು ಎಂದರು.
ಮೊದಲ ಬಾರಿ ಹಣಕಾಸು ಸಚಿವನಾದಾಗ “ನೂರು ಕುರಿ ಎಣಿಸಲು ಬಾರದವನು ಬಜೆಟ್ ಹೇಗೆ ಮಾಡ್ತಾನೆ?” ಎಂದು ಪತ್ರಿಕೆಯೊಂದು ಟೀಕಿಸಿತ್ತು. ಟೀಕೆಯನ್ನು ಸವಾಲಾಗಿ ಸ್ವೀಕರಿಸಿ ನಿರಂತರ ವಿಷಯ ತಜ್ಞರ ಜತೆ ಚರ್ಚಿಸಿ ಬಜೆಟ್ ಮಂಡಿಸಿದೆ. ಮರುದಿನ “ದಿ ಹಿಂದೂ” ಪತ್ರಿಕೆ ನನ್ನ ಬಜೆಟ್ ಅನ್ನು ಅತ್ಯುತ್ತಮ ಎಂದು ಶ್ಲಾಘಿಸಿ ಸಂಪಾದಕೀಯ ಬರೆಯಿತು. ಹೀಗಾಗಿ ಜ್ಞಾನ ದಾಹ ಮತ್ತು ಅಧ್ಯಯನಶೀಲತೆಯನ್ನು ಬೆಳೆಸಿಕೊಂಡರೆ ಸವಾಲನ್ನು ಗೆದ್ದು ಏನನ್ನಾದರೂ ಸಾಧಿಸಬಹುದು ಎಂದು ಮುಖ್ಯಮಂತ್ರಿ ತಿಳಿಸಿದರು.