ರಾಜ್ಯ ಸರ್ಕಾರವನ್ನು ಉರುಳಿಸಲು ಕೈಗೊಳ್ಳುವ ಬಿಜೆಪಿಯ ಯಾವುದೇ ಪ್ರಯತ್ನಗಳು ಫಲ ನೀಡುವುದಿಲ್ಲ – ದಿಗ್ವಿಜಯ ಸಿಂಗ್

ಹುಬ್ಬಳ್ಳಿ: ಜನರು ಕಾಂಗ್ರೆಸ್‌ಗೆ ಭಾರಿ ಜನಾದೇಶ ನೀಡಿರುವುದರಿಂದ ರಾಜ್ಯ ಸರ್ಕಾರವನ್ನು ಉರುಳಿಸಲು ಕೈಗೊಳ್ಳುವ ಬಿಜೆಪಿಯ ಯಾವುದೇ ಪ್ರಯತ್ನಗಳು ಫಲ ನೀಡುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮಂಗಳವಾರ ಹೇಳಿದ್ದಾರೆ. 
ಪಕ್ಷದ ಜಿಲ್ಲಾ ಘಟಕದ ವತಿಯಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಸಿಂಗ್

ಸುದ್ದಿಗಾರರೊಂದಿಗೆ ಮಾತನಾಡಿ, ‘ಶೇ 40 ಕಮಿಷನ್ ಹಣ ಬಳಸಿ ಬಿಜೆಪಿಯು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ. ಜನರು ಪಕ್ಷಕ್ಕೆ ಸಾಕಷ್ಟು ಸ್ಥಾನಗಳನ್ನು ನೀಡಿ ಆಶೀರ್ವದಿಸಿರುವುದರಿಂದ ಬಿಜೆಪಿಯ ಪ್ರತಿಯೊಂದು ಪ್ರಯತ್ನವೂ ವಿಫಲವಾಗುವುದು ಖಚಿತ ಎಂದರು.

ಕೇಸರಿ ಪಕ್ಷವನ್ನು ಲೇವಡಿ ಮಾಡಿದ ಅವರು, ಜನರಿಂದ ತಿರಸ್ಕೃತವಾಗಿದ್ದರೂ, ಬಿಜೆಪಿ ನಾಯಕರು ಇನ್ನೂ ಪಾಠ ಕಲಿತಿಲ್ಲ. ಮಧ್ಯಪ್ರದೇಶದ ಬಿಜೆಪಿ ಸರ್ಕಾರ ಸಹ ‘ಶೇ 50 ರಷ್ಟು ಕಮಿಷನ್’ ಆರೋಪದೊಂದಿಗೆ ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನೀಡಿರುವ ಜನಾದೇಶವು ರಾಷ್ಟ್ರರಾಜಕಾರಣಕ್ಕೆ ಹೊಸ ದಿಕ್ಕನ್ನು ನೀಡಿದೆ. ಕಾಂಗ್ರೆಸ್‌ಗೆ ಏಕತೆಯಲ್ಲಿ ನಂಬಿಕೆಯಿದೆ. ಆದರೆ, ಬಿಜೆಪಿಯು ಧರ್ಮದ ಆಧಾರದ ಮೇಲೆ ಜನರ ಮನಸ್ಸಿಗೆ ವಿಷವನ್ನು ತುಂಬುತ್ತಿದೆ ಎಂದರು. 

ಮಣಿಪುರ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈಶಾನ್ಯ ರಾಜ್ಯದಲ್ಲಿನ ಅಸ್ಥಿರ ಪರಿಸ್ಥಿತಿಗೆ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೊಣೆಗಾರರಾಗಿದ್ದಾರೆ. ರಾಜ್ಯದಲ್ಲಿನ ಗಲಭೆಗಳು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಜನರ ನಡುವೆ ಒಡಕು ಮೂಡಿಸುವ ಬಿಜೆಪಿಯ ರಾಜಕೀಯದ ಪರಿಣಾಮವಾಗಿದೆ. ರಾಜ್ಯದ ಅಮಾಯಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.

Latest Indian news

Popular Stories