ನಾನು ಯಾವುದೇ ಪಕ್ಷದವರಲ್ಲ, ಕನ್ನಡಿಗರ ಧ್ವನಿ – ಕುಮಾರ ಸ್ವಾಮಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮನ್ನು ಬಿಜೆಪಿ ವಕ್ತಾರ ಎಂದು ಕರೆದಿದ್ದಕ್ಕೆ ತಿರುಗೇಟು ನೀಡಿದ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ತಾವು ಯಾವುದೇ ಪಕ್ಷದವರಲ್ಲ, ಕನ್ನಡಿಗರ ಧ್ವನಿ ಎಂದು ಹೇಳಿದರು. 

ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದ ಅವರು, ಜನರು ತಮ್ಮನ್ನು ಪ್ರತಿಪಕ್ಷದಲ್ಲಿ ಇರಿಸಲು ನಿರ್ಧರಿಸಿದ್ದಾರೆ ಮತ್ತು ಸರ್ಕಾರದ ತಪ್ಪುಗಳನ್ನು ಪ್ರಶ್ನಿಸುವ ಮೂಲಕ ಅವರ ಧ್ವನಿಯಾಗಿ ಮುಂದುವರಿಯುತ್ತೇನೆ ಎಂದರು.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕುಮಾರಸ್ವಾಮಿ, ಪಕ್ಷದ ‘ಗರೀಬಿ ಹಠಾವೋ’ ಘೋಷಣೆಯಾಗಿಯೇ ಉಳಿದಿದೆ ಮತ್ತು ಅಸಮಾನತೆ ಖಾತರಿಯಾಗಿದೆ. ಇದಲ್ಲದೆ, ಸ್ವಾತಂತ್ರ್ಯದ ಮೊದಲು ಒಂದೇ ಈಸ್ಟ್ ಇಂಡಿಯಾ ಕಂಪನಿ ಇತ್ತು. ಆದರೆ, ಇಂದು ರಾಷ್ಟ್ರೀಯ ಪಕ್ಷಗಳ ರೂಪದಲ್ಲಿ ಜನರನ್ನು ಲೂಟಿ ಮಾಡುತ್ತಿದೆ ಎಂದು ಲೇವಡಿ ಮಾಡಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಸಿನಿಮಾ ಸೀಕ್ವೆಲ್‌ನಂತೆ ಪ್ರತಿದಿನ ಬಯಲಾಗುತ್ತಿವೆ. ಈ ಸರ್ಕಾರಕ್ಕೆ ತೆರೆ ಬೀಳುವ ದಿನ ಬಹಳ ದೂರವಿಲ್ಲ ಎಂದು ಅವರು ಹೇಳಿದರು.

ಹೆಚ್‌ಡಿ ಕುಮಾರಸ್ವಾಮಿ ಆರೋಪಗಳು ‘ಹಿಟ್ ಅಂಡ್ ರನ್’ ಕೇಸ್ ಇದ್ದಂತೆ, ಖಾಲಿ ಪೆನ್ ಡ್ರೈವ್ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸಾಕ್ಷ್ಯಾಧಾರಗಳನ್ನು ತೋರಿಸಿದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿದೆಯೇ ಎಂದು ಪ್ರಶ್ನಿಸಿದರು.

ತಮಿಳುನಾಡು ಸರ್ಕಾರ ನೀರು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಅವರು (ಕಾಂಗ್ರೆಸ್) ಮೇಕೆದಾಟು ಪಾದಯಾತ್ರೆ ಮಾಡಿದ್ದರು. ಈಗ ಈ ವಿಚಾರದಲ್ಲಿ ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ’ ಎಂದು ಹೇಳಿದರು. 

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಲ್ಲಾ ನಾಯಕರು ಮತ್ತು ಪಕ್ಷಗಳು ತಮ್ಮ ಬಳಿ ಇರುವ ಸಾಕ್ಷ್ಯವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಲು ಸ್ವತಂತ್ರರು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.

Latest Indian news

Popular Stories