ಮೈಸೂರು: ರಾಜ್ಯಕ್ಕೆ ಬಂದಿರುವ ದುಃಖ ದೂರು ಮಾಡುವಂತೆ ಚಾಮುಂಡಿ ದೇವಿಯನ್ನು ಬೇಡಿದ್ದೇನೆ. ಯಶಸ್ಸು ನಮಗೆ ಖಂಡಿತ ಸಿಗುತ್ತದೆ. ದುಷ್ಟರನ್ನು ದೂರ ಮಾಡಿ ಈ ರಾಜ್ಯಕ್ಕೆ ತಾಯಿ ಒಳ್ಳೆಯದು ಮಾಡುತ್ತಾಳೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರಣಾಳಿಕೆ ನೋಡಿ ಬಿಜೆಪಿ ಅವರು ಗಾಬರಿ ಆಗಿದ್ದಾರೆ. ಬಜರಂಗದಳಕ್ಕೂ ಆಂಜನೇಯನಿಗೂ ವ್ಯತ್ಯಾಸ ಇಲ್ವಾ? ಬಜರಂಗದಳ ಒಂದು ರಾಜಕೀಯ ಪಕ್ಷದ ವಿಭಾಗ. ಹುಟ್ಟುವವೆಲ್ಲಾ ಬಸವ ಆಗೋಕೆ ಆಗುತ್ತಾ? ಹನುಮಂತನ ಹೆಸರು ಇಟ್ಟು ಕೊಂಡವರೆಲ್ಲಾ ಹನುಮಂತ ಆಗಲು ಸಾಧ್ಯನಾ? ಬಜರಂಗದಳದವರು ನೈತಿಕ ಪೊಲೀಸ್ ಗಿರಿ ಮಾಡುತ್ತಿದ್ದಾರೆ. ಬಜರಂಗ ಬಲಿಯ ಭಕ್ತರು ನಾವು. ನೋಡಿ ಬಜರಂಗಬಲಿ ಕುಂಕುಮ ಇಟ್ಟು ಕೊಂಡಿದ್ದೇನೆ. ಆಂಜನೇಯನ ಭಕ್ತರು ನಾವು. ಈ ನಾಡಿನಲ್ಲಿ ಆಂಜನೇಯ ಹುಟ್ಟಿದ್ದಕ್ಕೆ ಸಾಕ್ಷಿ ಇದೆ ಎಂದರು.
ಇತಿಹಾಸ ಸೃಷ್ಟಿಸಿದ ಆಂಜನೇಯ ದೇವಾಲಯ ಅಭಿವೃದ್ಧಗೆ ಕಾಂಗ್ರೆಸ್ ವಿಶೇಷ ಒತ್ತು ನೀಡಲಿದೆ. ಯುವಕರಿಗೆ ಆಂಜನೇಯನ ಸಿದ್ದಾಂತ ಬೆಳೆಸಲು ಪ್ರತ್ಯೇಕ ಕಾರ್ಯಕ್ರಮ. ಅಂಜನಾದ್ರಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡುತ್ತೇವೆ. ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಗೆ ವಿಶೇಷ ಮಂಡಳಿ ಮಾಡುತ್ತೇವೆ. ಪ್ರತಿ ತಾಲೂಕಿನಲ್ಲೂ ಆಂಜನೇಯನ ಹೆಸರಿನಲ್ಲಿ ಪ್ರತ್ಯೇಕ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದರು.
ದೇವರ ಹೆಸರನ್ನು ರಾಜಕೀಯವಾಗಿ ಬಳಸಲು ಪ್ರಧಾನಿ ಹಾಗೂ ಬಿಜೆಪಿ ಯತ್ನಿಸುತ್ತಿದೆ. ಒಂದು ಆಂಜನೇಯನ ದೇವಾಲಯವನ್ನು ಬಿಜೆಪಿ ಅವರು ಕಟ್ಟಿದ್ದಾರಾ? ಏನು ಹೊಟ್ಟೆ ತುಂಬಿಸಿದೆ, ಯಾರಿಗೆ ಏನೂ ಸಹಾಯ ಮಾಡಿದೆ ಅಂತಾ ಪ್ರಧಾನಿಗಳು ಹೇಳುತ್ತಿಲ್ಲ. ದೇವರನ್ನು ನಾನು ನಂಬಿದ್ದೇನೆ. ವೈಯಕ್ತಿಕವಾಗಿಯೂ ನನಗೆ ಫಲ ಸಿಗುತ್ತೆ ರಾಜ್ಯಕ್ಕೂ ಫಲ ಸಿಗುತ್ತದೆ ಎಂದರು.