ಬೆಂಗಳೂರು: ಬಿಜೆಪಿಯಿಂದ ದೇಶವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಕರೆ ನೀಡಿದರು.
ಕಾಂಗ್ರೆಸ್ ಕಚೇರಿಯಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿಯ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ 26 ವಿರೋಧ ಪಕ್ಷಗಳ ಮೈತ್ರಿಕೂಟ I.N.D.I.A ಆರಂಭಿಸಿರುವುದು ಇಡೀ ದೇಶಕ್ಕೆ ಬಿಜೆಪಿ ಪಕ್ಷದ ವಿರುದ್ಧ ಹೋರಾಡುವ ವಿಶ್ವಾಸವನ್ನು ನೀಡಿದೆ ಎಂದು ಹೇಳಿದರು.
ನಾವು ಬ್ರಿಟಿಷರ ಆಡಳಿತದ ವಿರುದ್ಧ ಅಂದು ಹೋರಾಡಿದ್ದೆವು. ಇದೀಗ ಕೇಂದ್ರದ ಕೋಮುವಾದಿ ಮತ್ತು ಸರ್ವಾಧಿಕಾರಿ ಸರ್ಕಾರವನ್ನು ತೊಡೆದುಹಾಕಲು ಹೋರಾಡಬೇಕಾಗಿದೆ. ಬಿಜೆಪಿ ಭಾರತವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಬಯಸುತ್ತಿದೆ. ಆದರೆ ನೀವೆಲ್ಲರೂ ಬಿಜೆಪಿ ಮುಕ್ತ ಭಾರತಕ್ಕಾಗಿ ಕೆಲಸ ಮಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬೆಂಗಳೂರಿನಲ್ಲಿ ನಡೆದ I.N.D.I.A ಸಭೆಯ ನಂತರ, ಇತರ ರಾಜ್ಯಗಳ ಉನ್ನತ ನಾಯಕರು ‘ಕರ್ನಾಟಕ ಮಾದರಿ’ಯನ್ನು ಅನುಸರಿಸಲು ಮುಂದಾಗುತ್ತಿದ್ದಾರೆ. ಇದು ಎಲ್ಲಾ ದ್ವೇಷಗಳು ಮತ್ತು ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು, ತಮ್ಮ ಪಕ್ಷಗಳ ಹಿತಾಸಕ್ತಿಗಳನ್ನು ಮುಖ್ಯ ಎಂಬುದನ್ನು ಸಾರುತ್ತಿದೆ ಎಂದು ಹೇಳಿದರು.
ಇದೇ ವೇಳೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಕಾಂಗ್ರೆಸ್ ವಾಮಾಚಾರ ಮಾರ್ಗ ಹಿಡಿದಿತ್ತು ಎಂಬ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರ ಆರೋಪದ ಕುರಿತು ಡಿಕೆ.ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಯಾರೋ ನಾಯಕರೊಬ್ಬರು ಹೇಳುತ್ತಿದ್ದರು ನಾನು ಮಾಟ ಮಂತ್ರ ಮಾಡಿದ್ದೇನೆ ಎಂದು, ಕಾರಣ ಮಾಟಮಂತ್ರವಲ್ಲ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಬೆಳಗಾವಿಯ ಕಾಂಗ್ರೆಸ್ ಬಾವಿ ಬಳಿ ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೆವು. ಆ ಬಾವಿಯ ನೀರಿನಿಂದ ರಸ್ತೆ ಸ್ವಚ್ಚಗೊಳಿಸಿ ಈ ರಾಜ್ಯಕ್ಕೆ ಅಂಟಿರುವ ದರಿದ್ರ ಕೊಳೆ ಹೋಗಲಿ ಎಂದು ಕೆಲಸ ಪ್ರಾರಂಭ ಮಾಡಿದೆವು ಅದರಂತೆ ಬದಲಾವಣೆ ಆಯಿತು ಎಂದರು.
ಇದೇ ವೇಳೆ ಆಗಸ್ಟ್ 20ನೇ ತಾರೀಕು ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೂ ಐದು ಗ್ಯಾರಂಟಿ ಯೋಜನೆಗಳ ಲಾಭ ಸಿಗುತ್ತಿರುವುದರಿಂದ 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಅವರ ಮನವೊಲಿಸಬೇಕು ಎಂದು ಸಲಹೆ ನೀಡಿದರು.