ಎಲೆಕ್ಟ್ರೋಲ್ ಬಾಂಡ್ ಸ್ಥಗಿತ : ಸತ್ಯಕ್ಕೆ ಯಾವತ್ತೂ ಸಾವಿಲ್ಲ ಎಂದ ಖಂಡ್ರೆ

ಕದಂಬ ನ್ಯೂಸ್ ಡೆಸ್ಕ್ : ಫೆ.15: ಎಲೆಕ್ಟ್ರೋಲ್ ಬಾಂಡ್ ಗಳು ಅಸಾಂವಿಧಾನಿಕ ಮತ್ತು ಕೂಡಲೇ ಇದನ್ನು ಸ್ಥಗಿತಗೊಳಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದನ್ನು ಸ್ವಾಗತಿಸುತ್ತೇನೆ. ಈ ಬಾಂಡ್ ಯೋಜನೆ ಮಾಹಿತಿ ಹಕ್ಕಿನ ಉಲ್ಲಂಘನೆಯಾಗಿದ್ದು, ಪರೋಕ್ಷ ಭ್ರಷ್ಟಾಚಾರವಾಗಿತ್ತು ಎಂದು ಅರಣ್ಯ ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ದೇಣಿಗೆ ಕೊಟ್ಟವರ ಹೆಸರು ಗೌಪ್ಯವಾಗಿಡುವುದು, ಆಡಳಿತದಲ್ಲಿರುವ ಒಂದು ಪಕ್ಷ ಇದರ ಸಂಪೂರ್ಣ ಪ್ರಯೋಜನ ಪಡೆಯುವುದು ಪ್ರಜಾಪ್ರಭುತ್ವ ಮತ್ತು ಚುನಾವಣಾ ವ್ಯವಸ್ಥೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿತ್ತು. ಇದನ್ನು ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ನ ಈ ತೀರ್ಪು ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರು ಇಟ್ಟಿದ್ದ ನಂಬಿಕೆ ಮತ್ತು ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಆದ ಈಶ್ವರ ಖಂಡ್ರೆ ಹೇಳಿದ್ದಾರೆ. ಸತ್ಯಮೇವ ಜಯತೆ – ಸತ್ಯಕ್ಕೆ ಯಾವತ್ತೂ ಸಾವಿಲ್ಲ. ಕೊನೆಗೂ ನ್ಯಾಯ ದೊರಕಿದೆ. ಈವರೆಗೆ ನೀಡಲಾಗಿರುವ ಎಲ್ಲ ಎಲೆಕ್ಟ್ರೋಲ್ ಬಾಂಡ್ ಗಳ ಮಾಹಿತಿ ಬಹಿರಂಗ ಪಡಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

Latest Indian news

Popular Stories