ನವದೆಹಲಿ: ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಮರುಪರಿಶೀಲಿಸಲು ಹೊಸದಾಗಿ ಜಾರಿಗೆ ತರಲಾದ ಮೂರು ಕಾನೂನುಗಳು ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
ಭಾರತೀಯ ನ್ಯಾಯ ( ದ್ವಿತೀಯ) ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ (ದ್ವಿತೀಯ) ಕಾಯ್ದೆಗಳು ಜುಲೈನಿಂದ ಅನುಷ್ಟಾನಕ್ಕೆ ಬರಲಿವೆ.
ಈ ಮೂರು ಕಾನೂನುಗಳಿಗೆ ಕಳೆದ ವರ್ಷ ಡಿಸೆಂಬರ್ 21 ರಂದು ಸಂಸತ್ತಿನಲ್ಲಿ ಅನುಮೋದನೆ ನೀಡಲಾಗಿತ್ತು. ಡಿಸೆಂಬರ್ 25 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದರು.
ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ ಅಧಿಸೂಚನೆ ಪ್ರಕಾರ ಮೂರು ಹೊಸ ಕಾನೂನುಗಳ ನಿಬಂಧನೆಗಳು ಜುಲೈ 1 ರಿಂದ ಜಾರಿಗೆ ಬರಲಿವೆ. ಈ ಕಾನೂನುಗಳು ವಸಾಹತುಶಾಹಿ-ಯುಗದ ಕ್ರಮವಾಗಿ ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು 1872 ರ ಭಾರತೀಯ ಸಾಕ್ಷಿ ಕಾಯ್ದೆಯನ್ನು ಬದಲಾಯಿಸಿವೆ.
ಮೂರು ಕಾನೂನುಗಳು ವಿವಿಧ ಅಪರಾಧಗಳು ಮತ್ತು ಅವುಗಳ ಶಿಕ್ಷೆಗಳ ವ್ಯಾಖ್ಯಾನಗಳನ್ನು ನೀಡುವ ಮೂಲಕ ದೇಶದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಹೊಂದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.