ಗದಗ: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಕೆಲ ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಮನೆ ಮಗನೇ ಕುಟುಂಬ ಮುಗಿಸಲು ಸುಪಾರಿ ನೀಡಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಸಂಬಂಧ ಎಂಟು ಜನರು ಪೊಲೀಸರು ಬಂಧಿಸಿದ್ದಾರೆ.
ಗದಗ ನಗರದ ದಾಸರ ಓಣಿಯಲ್ಲಿ ನಡೆದಿದ್ದ ಭೀಕರ ಪ್ರಕರಣದಲ್ಲಿ ನಾಲ್ವರ ಕೊಲೆಯಾಗಿತ್ತು. ಪ್ರಕಾಶ್ ಬಾಕಳೆ ಅವರ ಮೊದಲ ಪತ್ನಿಯ ಹಿರಿಯ ಮಗ ವಿನಾಯಕ್ ಬಾಕಳೆ ಅವರೇ ಕೊಲೆಗೆ ಸುಪಾರಿ ನೀಡಿದ್ದಾಗಿ ತಿಳಿದು ಬಂದಿದೆ.
ಘಟನೆ ಸಂಬಂಧ ಗದುಗಿನ ಫೈರೋಜ್ ಖಾಜಿ (29), ಜಿಶಾನ್ ಖಾಜಿ (24), ಮೀರಜ್ ನ ಕಾಂಟ್ರಾಕ್ಟ್ ಕಿಲ್ಲರ್ಸ್ ಅವಳಿ ಸಹೋದರರಾದ ಸಾಹಿಲ್ ಖಾಜಿ (19), ಸೋಹೆಲ್ ಖಾಜಿ (18), ಸುಲ್ತಾನ್ ಶೇಖ್ (23), ಮಹೇಶ ಸಾಳೊಂಕೆ (21) ಹಾಗೂ ವಾಹಿದ್ ಬೇಪಾರಿ (21) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ವಿನಾಯಕ ಹಾಗೂ ಅವರ ತಂದೆ ಪ್ರಕಾಶ ಬಾಕಳೆ ಮಧ್ಯೆ ಆಸ್ತಿ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ನನ್ನ ಅನುಮತಿ ಇಲ್ಲದೆ ಆಸ್ತಿ ಮಾರಾಟ ಮಾಡಬಾರದು ಎಂದು ವಿನಾಯಕನಿಗೆ ತಂದೆ ಪ್ರಕಾಶ ಬಾಕಳೆ ಎಚ್ಚರಿಕೆ ನೀಡಿದ್ದರು.
ವಿನಾಯಕ ಬಾಕಳೆ ಫೈರೋಜ್ ಖಾಜಿಗೆ ಸುಪಾರಿ ನೀಡಿದ್ದು, 65 ಲಕ್ಷ ರೂ.ಗೆ ಮಾತುಕತೆ ನಡೆಸಿ ಮುಂಗಡವಾಗಿ 2 ಲಕ್ಷ ರೂ. ನೀಡಿದ್ದ. ನಗರಸಭೆ ಮಾಜಿ ಅಧ್ಯಕ್ಷ ಪ್ರಕಾಶ್ ಬಾಕಳೆ, ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಟಾರ್ಗೆಟ್ ಮಾಡಿ ಸುಪಾರಿ ನೀಡಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಮೂರು ಗಂಟೆಗೆ ಮನೆಗೆ ಎಂಟ್ರಿ ನೀಡಿದ್ದ ಆರೋಪಿಗಳು ಕಾರ್ತಿಕ್ ಬಾಕಳೆ (28), ಪರಶುರಾಮ್ ಹಾದಿಮನಿ (55), ಲಕ್ಷ್ಮೀ ಹಾದಿಮನಿ (45) ಆಕಾಂಕ್ಷಾ (16) ಹತ್ಯೆ ಮಾಡಿದ್ದರು.
ಮೀರಜ್ ನಲ್ಲಿ ನಾಲ್ವರ ಆರೋಪಿಗಳ ಬಂಧನ ಮಾಡಲಾಗಿದೆ. ಕೊಲೆ ನಂತರ ಮನೆಯಲ್ಲಿದ್ದ ಚಿನ್ನಾಭರಣ, ನಗದು ತೆಗೆದುಕೊಂಡು ಹೋಗುವ ಡೀಲ್ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಕೃತ್ಯ ನಡೆದ 72 ಗಂಟೆಗಳಲ್ಲಿ ಪ್ರಕರಣ ಬೇಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಅವರರ ತಂಡಕ್ಕೆ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರಿಂದ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.