ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್​ಗೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬ್ಲ್ಯಾಕ್​ಮೇಲ್; ದೂರು ದಾಖಲು

ಬೆಂಗಳೂರು: ದಾವಣಗೆರೆ ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರ್ ಅವರಿ​ಗೆ ಅಪರಿಚಿತ ಮಹಿಳೆಯೊಬ್ಬರು ಮೊದಲು ಮೆಸೇಜ್ ಮಾಡಿ ನಂತರ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಂಸದರು ಪೊಲೀಸರಿಗೆ ದೂರು ನೀಡಿದ್ದಾರೆ.

ಜಿಎಂ ಸಿದ್ದೇಶ್ವರ್ ಅವರು ನಗರದ ಕಮರ್ಷಿಯಲ್​ಸ್ಟ್ರೀಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್​ಗೆ ಆರಂಭದಲ್ಲಿ ಸಂಸದರು ಉತ್ತರ ನೀಡಿರಲಿಲ್ಲ. ನಂತರ ವಿಡಿಯೋ ಹಾಗೂ ಆಡಿಯೋ ಕರೆ ಮಾಡಲಾಗಿದ್ದು, ಬ್ಲ್ಯಾಕ್​ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ಜುಲೈ 20ರಂದು ರಾತ್ರಿ 10.16ಕ್ಕೆ ಮೊದಲ ಬಾರಿಗೆ ಅಪರಿಚಿತ ಸಂಖ್ಯೆಯಿಂದ ಸಂಸದರ ಮೊಬೈಲ್​ಗೆ ‘Hi….How Are You.?’ ಎಂದು ಮೆಸೇಜ್​ ಬಂದಿದೆ. ಅಪರಿಚಿತರ ಮೆಸೇಜ್​ಗೆ ಸಿದ್ದೇಶ್ವರ್ ಅವರು ಪ್ರತಿಕ್ರಿಯೆ ನೀಡಿಲ್ಲ. ಅದಾದ ನಂತರ 10.22ಕ್ಕೆ ದಿಢೀರ್ ಅಂತ ವಿಡಿಯೋ ಕಾಲ್ ಬಂದಿದೆ. ಯಾರು? ಏನು ಎಂದು ಪ್ರಶ್ನಿಸುತ್ತಿದ್ದಂತೆಯೇ ಹಿಂದಿಯಲ್ಲಿ ಮಾತನಾಡಿದ್ದು, ಬಳಿಕ ಮತ್ತೆ ರಾತ್ರಿ 10.24ಕ್ಕೆ ಆಡಿಯೋ ಕಾಲ್ ಮಾಡಿ ಮತ್ತದೇ ರೀತಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಕರೆ ಕಟ್ ಮಾಡಿದ್ದರೂ ಮತ್ತೆ ಮತ್ತೆ ಕಾಲ್ ಮಾಡಿದ್ದ ಅಪರಿಚಿತ ಮಹಿಳೆ, ರಾತ್ರಿ 10.27ಕ್ಕೆ ವಾಟ್ಸಪ್ ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ.

ಈ ಘಟನೆ ನಡೆದು ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿ ವಿಡಿಯೋ ರೆಕಾರ್ಡ್ ಅನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಲಾಗಿದೆ. 

ಈ ಸಂಬಂಧ ಸಂಸದರು ಕರ್ಮಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Latest Indian news

Popular Stories