ಹೊಸದಿಲ್ಲಿ: ಪ್ರಸಿದ್ಧ ಸಂವಹನ ಮಾಧ್ಯಮ ಜಿಮೇಲ್ ಸ್ಥಗಿತವಾಗುತ್ತದೆ ಎನ್ನುವ ಅಂತೆ ಕಂತೆಗಳ ಸುದ್ದಿಗಳ ನಡುವೆ ಮಾತೃಸಂಸ್ಥೆ ಗೂಗಲ್ ಇಂದು ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಜಿಮೇಲ್ ಯಾವುದೇ ಕಾರಣಕ್ಕೂ ರದ್ದಾಗುತ್ತಿಲ್ಲ ಎಂದು ಖಚಿತ ಪಡಿಸಿದೆ.
ಗೂಗಲ್ ಸಂಸ್ಥೆಯು ಶೀಘ್ರದಲ್ಲಿಯೇ ಜಿಮೇಲ್ ನ್ನು ಸ್ಥಗಿತಗೊಳಿಸುತ್ತದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಪೋಸ್ಟ್ ನಲ್ಲಿ ಗೂಗಲ್ ಸಂಸ್ಥೆಯ ಇಮೇಲ್ ಒಂದರ ಸ್ಕ್ರೀನ್ ಶಾಟ್ ಕೂಡಾ ಹರಿದಾಡಿತ್ತು. ಇದರ ಬಳಕೆದಾರರ ಆತಂಕಕ್ಕೆ ಕಾರಣವಾಗಿತ್ತು.
“ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಸಂಪರ್ಕಿಸುವ, ತಡೆರಹಿತ ಸಂವಹನವನ್ನು ಸಕ್ರಿಯಗೊಳಿಸುವ ಮತ್ತು ಲೆಕ್ಕವಿಲ್ಲದಷ್ಟು ಸಂಪರ್ಕಗಳನ್ನು ಉತ್ತೇಜಿಸುವ ವರ್ಷಗಳ ನಂತರ, ಜಿಮೇಲ್ ನ ಪ್ರಯಾಣವು ಕೊನೆಗೊಳ್ಳುತ್ತಿದೆ. ಆಗಸ್ಟ್ 1, 2024 ರಿಂದ, ಜಿಮೇಲ್ ಅಧಿಕೃತವಾಗಿ ಸೂರ್ಯಾಸ್ತವಾಗಲಿದ್ದು, ಅದರ ಸೇವೆಯ ಅಂತ್ಯವನ್ನು ಗುರುತಿಸುತ್ತದೆ” ಎಂದು ಸಂದೇಶದಲ್ಲಿ ಬರೆಯಲಾಗಿತ್ತು.
“ಇದರರ್ಥ ಈ ದಿನಾಂಕದ ಬಳಿಕ ಜಿಮೇಲ್ ಇಮೇಲ್ ಗಳನ್ನು ಕಳುಹಿಸಲು, ಸ್ವೀಕರಿಸಲು ಅಥವಾ ಸಂಗ್ರಹಿಸಲು ಬೆಂಬಲಿಸುವುದಿಲ್ಲ. ಜಿಮೇಲ್ ಅನ್ನು ಸೂರ್ಯಾಸ್ತಗೊಳಿಸುವ ನಿರ್ಧಾರವನ್ನು ವಿಕಸನಗೊಳ್ಳುತ್ತಿರುವ ಡಿಜಿಟಲ್ ಲ್ಯಾಂಡ್ ಸ್ಕೇಪ್ ಮತ್ತು ಉನ್ನತ-ಗುಣಮಟ್ಟದ, ಹೊಸ ಪರಿಹಾರಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಎಚ್ಚರಿಕೆಯಿಂದ ಪರಿಗಣಿಸಿ ಮಾಡಲಾಗಿದೆ” ಎಂದು ಆ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿತ್ತು.
ಈ ಪೋಸ್ಟ್ ಜಿಮೇಲ್ ಬಳಕೆದಾರರಲ್ಲಿ ಆತಂಕ ಸೃಷ್ಟಿಸಿತ್ತು, ಸ್ಕ್ರೀನ್ ಶಾಟ್ ಪೋಸ್ಟ್ 4 ಮಿಲಿಯನ್ ವೀಕ್ಷಣೆ ಪಡೆದಿತ್ತು.
ಇದೀಗ ಎಕ್ಸ್ ಜಾಲತಾಣದಲ್ಲಿ (ಟ್ವಿಟರ್) ಜಿಮೇಲ್ ಅಧಿಕೃತ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಜಿಮೇಲ್ ಉಳಿಯಲಿದೆ ಎಂದು ಬರೆಯಲಾಗಿದೆ.