ದಲಿತೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗುತ್ತಾರೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತಿಯ ಹಲವಾರು ಸದಸ್ಯರು ಅಧ್ಯಕ್ಷರ ಚುನಾವಣೆಗೆ ಗೈರಾದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳಿಯಲ್ಲಿ ನಡೆದಿದೆ. ಅಧ್ಯಕ್ಷರ ಆಯ್ಕೆಗೆ ಕೋರಂ ಇಲ್ಲದೆ, ಚುನಾವಣೆ ಮುಂದೂಡಲ್ಪಟ್ಟಿದ್ದು, ಅವಿರೋಧವಾಗಿ ಆಯ್ಕೆಯಾಗಬೇಕಿದ್ದ ಸದಸ್ಯ ಕಣ್ಣೀರು ಹಾಕಿದ್ದಾರೆ.
ಹೊಂಗಡಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಗ್ರಾಮ ಪಂಚಾಯತಿಯಲ್ಲಿ ಎಸ್‌ಸಿ ಸಮುದಾಯಕ್ಕೆ ಸೇರಿದ ವನಜಾಕ್ಷಿ ಒಬ್ಬರೇ ಸದಸ್ಯರಿದ್ದರು. ಕಾರಣ, ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು. ಅವರೇ ಅವಿರೋಧವಾಗಿ ಆಯ್ಕೆಯಾಗಬೇಕಿತ್ತು. ಶುಕ್ರವಾರ ಚುನಾವಣಾ ಪ್ರಕ್ರಿಯೆ ನಡೆಯಬೇಕಿತ್ತು.
ಆದರೆ, ಗ್ರಾಮ ಪಂಚಾಯತಿಯಲ್ಲಿ 6 ಮಂದಿ ಸದಸ್ಯರಿದ್ದು, ಕೋರಂಗೆ ಕನಿಷ್ಠ ಮೂರು ಮಂದಿ ಸದಸ್ಯರು ಭಾಗವಹಿಸಬೇಕಿತ್ತು. ಆದರೆ, ಇಬ್ಬರು ಮಾತ್ರವೇ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಧಿಕಾರಿಗಳು ಸಮಯವನ್ನು ವಿಸ್ತರಿಸಿದರೂ, ಉಳಿದ ಯಾರೊಬ್ಬರೂ ಗ್ರಾಮ ಪಂಚಾಯತಿಯತ್ತ ಸುಳಿದಿಲ್ಲ. ಪರಿಣಾಮ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ದಲಿತೆ ಎಂಬ ಕಾರಣಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸದ ಸದಸ್ಯರ ಜಾತಿಗ್ರಸ್ತ ಧೋರಣೆಯಿಂದ ನೊಂದ ವನಜಾಕ್ಷಿ ಅವರು ಕಣ್ಣೀರು ಹಾಕಿದ್ದಾರೆ.