ಹಾಸನ: ಎಚ್ ಡಿ ರೇವಣ್ಣ ಆಪ್ತ, ಗ್ರಾನೈಟ್ ಉದ್ಯಮಿ ಹತ್ಯೆ; ಪ್ರಮುಖ ಆರೋಪಿಗಳ ಬಂಧನ

ಹಾಸನ: ಇಡೀ ಹಾಸನ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಗ್ರಾನೈಟ್ ಉದ್ಯಮಿ ಹಾಗೂ ಮಾಜಿ ಸಚಿವ ಎಚ್ ಡಿ ರೇವಣ್ಣ ಆಪ್ತರಾಗಿದ್ದ ಕೃಷ್ಣೇಗೌಡ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಕಳೆದ ಆಗಸ್ಟ್ 9ರಂದು ನಡೆದಿದ್ದ ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಐದು ತಿಂಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿಗಳನ್ನು ಫೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಎ1 ಆರೋಪಿ ಯೋಗಾನಂದ(38), ಎ2 ಆರೋಪಿ ಅನಿಲ್(32) ಎಂಬುವವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳ ತಿಳಿಸಿವೆ.

ಯೋಗಾನಂದ ಹಣಕಾಸು ವಿಚಾರದಲ್ಲಿ ವೈಶಮ್ಯದಿಂದ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಎಂದು ಹೇಳಲಾಗಿದೆ. ಉದ್ಯಮಿ ಕೃಷ್ಣೇಗೌಡ ಕೊಲೆ‌ ಸಂಬಂಧ 14 ಆರೋಪಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದರು. 12 ಆರೋಪಿಗಳ ಬಂಧನವಾಗಿದ್ದರೂ ಪ್ರಕರಣದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು. ಹಾಸನದಲ್ಲಿ ನಡೆದ ಹೈ ಪ್ರೊಫೈಲ್ ಹತ್ಯೆ ಇದಾಗಿದ್ದು, ಹೀಗಾಗಿ ಆರೋಪಿಗಳ ಬಂಧನ ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.

ಪೊಲೀಸರು ಕ್ರಮವಾಗಿ ಬಾಣಾವರ ಮತ್ತು ಗೊರೂರು ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಗಳಾದ ಸುರೇಶ್, ಶಿವಶಂಕರ್ ಮತ್ತು ಪ್ರಸನ್ನ ಅವರನ್ನೊಳಗೊಂಡ ವಿಶೇಷ ತಂಡವನ್ನು ಇವರ ಬಂಧನಕ್ಕಾಗಿ ರಚಿಸಿದ್ದರು. ಇದೀಗ ಸತತ ಕಾರ್ಯಾಚರಣೆ ಬಳಿಕ ಸಿಐಡಿ ಹಾಗೂ ಹಾಸನ ಪೊಲೀಸರು ನಿನ್ನೆ ತುಮಕೂರು ಜಿಲ್ಲೆಯ ತುರುವೇಕರೆ ಬಳಿ ತೋಟದ ಮನೆಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಸಿಐಡಿ ಹಾಗು ಹಾಸನ ಪೊಲೀಸರಿಂದ ಜಂಟೀ ಆಪರೇಷನ್ ವೇಳೆ ಆರೋಪಿಗಳ ಬಂಧನವಾಗಿದೆ. ಬಂಧನದ ವೇಳೆ ಆರೋಪಿಗಳು ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದರು. ಈ ವೇಳೆ ಕೆಲ ಪೊಲೀಸರಿಗೂ ಗಾಯಗಳಾಗಿವೆ. ಈ ಘಟನೆ ಸಂಬಂಧ ತುರುವೆಕೆರೆ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಹಾಗು ಆತ್ಮಹತ್ಯೆ ಯತ್ನ ಕೇಸ್ ದಾಖಲಾಗಿದೆ. ವಿಷ ಕುಡಿದಂತೆ ನಾಟಕ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆ ಕೇಸ್ ಅನ್ನು ಹಾಸನ ಪೊಲೀಸರು ಬೇದಿಸಿದ್ದಾರೆ.

Latest Indian news

Popular Stories