ವಿರೋಧ ಪಕ್ಷದ ನಾಯಕನಾಗಿ ಎಚ್.ಡಿ.ಕೆ ಯನ್ನು ಆಯ್ಕೆ ಮಾಡುವ ಸಾಧ್ಯತೆ – ಬಿಜೆಪಿಯಿಂದ ಅಚ್ಚರಿಯ ನಡೆ?

ಬೆಂಗಳೂರು : ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ಎರಡು ತಿಂಗಳು ಕಳೆದರೂ ಕರ್ನಾಟಕದಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾತ್ರ ಆಗಿಲ್ಲ. 66 ಕ್ಷೇತ್ರಗಳಲ್ಲಿ ಗೆದ್ದಿರುವ ಬಿಜೆಪಿ ವಿರೋಧ ಪಕ್ಷದ ನಾಯಕನ ಆಯ್ಕೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ವಿಪಕ್ಷ ನಾಯಕರಾಗಿ ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಯ್ಕೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಬಿಜೆಪಿ – ಜೆಡಿಎಸ್‌ ಮೈತ್ರಿಯಾಗುವ ನಿರೀಕ್ಷೆ ಇದೆ.

ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಹಿನ್ನೆಲೆ ಜುಲೈ 16-17ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರಾದೇಶಿಕ ಪಕ್ಷಗಳ ಸಭೆ ನಡೆಯುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ವಿರೋಧಿ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸಲು ಜುಲೈ 18ರಂದು ದಿಲ್ಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಎನ್‌ಡಿಎ ನಾಯಕರ ಸಭೆ ಇದೆ. ಕರ್ನಾಟಕದಿಂದ ಜೆಡಿಎಸ್‌ ಭಾಗವಹಿಸುವ ಸಾಧ್ಯತೆ ಇದೆ. ಈ ಸಭೆಯ ಬಳಿಕ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಸುಳಿವನ್ನು ನೀಡಿದ್ದು, ಮಾಧ್ಯಮದವರೊಂದಿಗೆ ಔಪಚಾರಿಕವಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಜುಲೈ 18ರ ಬಳಿಕವೇ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್‌ ನಿರ್ಧರಿಸಿದೆ ಎನ್ನಲಾಗಿದೆ. ಜುಲೈ 18ರಂದು ದಿಲ್ಲಿಯಲ್ಲಿ ನಡೆಯುವ ಎನ್‌ಡಿಎ ಸಭೆಯಲ್ಲಿ ಜೆಡಿಎಸ್‌ ಭಾಗವಹಿಸಿ ಬಿಜೆಪಿ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡರೆ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿ ಬಹಿರಂಗ ಕಿತ್ತಾಟ ನಡೆಯುತ್ತಿರುವ ಸಲುವಾಗಿ ಬಿಜೆಪಿ ಹೈಕಮಾಂಡ್‌ ಈ ರೀತಿಯ ನಡೆ ಅನುಸರಿಸಿದೆ ಎನ್ನಲಾಗಿದೆ.

ಕೇವಲ ಬಸವರಾಜ ಬೊಮ್ಮಾಯಿ ಅವರ ಅನೌಪಚಾರಿಕ ಮಾತಷ್ಟೇ ಅಲ್ಲದೇ ಕಾಂಗ್ರೆಸ್‌ ಶಾಸಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ್‌ ಸವದಿ ಕೂಡ ಎಚ್‌ಡಿ ಕುಮಾರಸ್ವಾಮಿ ವಿಪಕ್ಷ ನಾಯಕ ಆಗಲಿದ್ದಾರೆ ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಟಿಕೆಟ್‌ ಸಿಗದೇ ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿದ್ದ ಲಕ್ಷ್ಮಣ್‌ ಸವದಿ ಹೇಳಿಕೆ ಕೂಡ ಪ್ರಮುಖವಾಗುತ್ತಿದೆ. ಇದರ ನಡುವೆಯೇ ಕೆಲ ದಿನಗಳ ಹಿಂದೆ ಮಾಜಿ ಸಚಿವ ಮುರುಗೇಶ್‌ ನಿರಾಣಿ ಕೂಡ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ವಿಶೇಷ ವ್ಯಕ್ತಿ ಬರಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯ ಅಚ್ಚರಿಯ ನಡೆಯ ಬಗ್ಗೆ ಸುಳಿವನ್ನು ನೀಡಿದ್ದರು. ಅದಲ್ಲದೇ ಯಾರೇ ವಿಪಕ್ಷ ನಾಯಕನಾದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ನಿರಾಣಿ ಹೇಳಿದ್ದರು.

ಇನ್ನು, ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ನಾಯಕರಿಗಿಂತ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ಅಬ್ಬರಿಸುತ್ತಿದ್ದಾರೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿಕಾರುತ್ತಿದ್ದು, ವರ್ಗಾವಣೆ ದಂಧೆ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಅದಲ್ಲದೇ ಅನೇಕ ಬಾರಿ ಸದನದಲ್ಲಿ ಬಿಜೆಪಿ ನಾಯಕರಿಗೆ ನೆರವು ಕೂಡ ಆಗುತ್ತಿದ್ದು, ಕಾಂಗ್ರೆಸ್‌ ನಾಯಕರ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಕಾಂಗ್ರೆಸ್‌ ನಾಯಕರೇ ಅನೇಕ ಬಾರಿ ಸದನದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರನ್ನೇ ವಿಪಕ್ಷ ನಾಯಕರನ್ನಾಗಿ ಮಾಡಿಬಿಡಿ ಎಂದು ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಕಾಂಗ್ರೆಸ್‌ ವಿರುದ್ಧ ಜೆಡಿಎಸ್‌ ನಾಯಕ ಎಚ್‌ಡಿಕೆ ಹೋರಾಟ ಮಾಡುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ಜೊತೆ ನಿಲ್ಲುತ್ತಿದ್ದಾರೆ.

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ಆರೋಪ ಮಾಡಿದಾಗ ಬಿಜೆಪಿಯ ಮಾಸ್‌ ಲೀಡರ್‌, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ಅವರು ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದರು. ಎಚ್‌ಡಿ ಕುಮಾರಸ್ವಾಮಿ ಮಾಡಿದ ಆರೋಪಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಮುಂದೆ ಅವರು, ನಾವು ಜೊತೆಯಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದರು. ಈ ಮೂಲಕ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯ ಬಗ್ಗೆ ಸುಳಿವನ್ನು ನೀಡಿದ್ದರು. 2006ರಲ್ಲಿ ಎಚ್‌ಡಿ ಕುಮಾರಸ್ವಾಮಿ ಹಾಗೂ ಬಿಎಸ್‌ ಯಡಿಯೂರಪ್ಪ ಸೇರಿಯೇ ಮೈತ್ರಿ ಮಾಡಿಕೊಂಡಿದ್ದರು. ಆಗ ಎಚ್‌ಡಿಕೆ ಮುಖ್ಯಮಂತ್ರಿಯಾಗಿದ್ದರೆ, ಬಿಎಸ್‌ವೈ ಉಪಮುಖ್ಯಮಂತ್ರಿಯಾಗಿದ್ದರು. ಅಧಿಕಾರ ಹಂಚಿಕೆ ವಿಚಾರವಾಗಿ ಮೈತ್ರಿ ಮುರಿದುಬಿದ್ದಿತ್ತು. ಈಗ ಮತ್ತೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗುವ ಸಾಧ್ಯತೆ ಇದೆ.

ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ, ಸೋಲಿನಿಂದ ಚೇತರಿಸಿಕೊಂಡು ಲೋಕಸಭಾ ಚುನಾವಣೆಗೆ ತಯಾರಾಗಬೇಕಿತ್ತು. ಆದರೆ, ಬಿಜೆಪಿಯ ರಾಜ್ಯ ನಾಯಕರು ಬಹಿರಂಗ ಕಿತ್ತಾಟಕ್ಕೆ ಇಳಿದಿರುವುದು ಹೈಕಮಾಂಡ್‌ಗೆ ತಲೆನೋವು ತಂದಿತ್ತು. ಇದರಿಂದ ವಿಪಕ್ಷ ನಾಯಕನ ಆಯ್ಕೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕವನ್ನು ವಿಳಂಬ ಮಾಡಿದೆ. ಈಗ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರನ್ನು ವಿಪಕ್ಷ ನಾಯಕನನ್ನಾಗಿ ಮಾಡಲು ಹೈಕಮಾಂಡ್‌ ಮುಂದಾಗಿದೆ ಎನ್ನಲಾಗಿದೆ. ಬೇರೆ ರಾಜ್ಯಗಳಿಗೆ ರಾಜ್ಯಾಧ್ಯಕ್ಷರನ್ನು ನೇಮಿಸಿದರೂ ಕರ್ನಾಟಕಕ್ಕೆ ಮಾತ್ರ ನೇಮಿಸಲಿಲ್ಲ. ವಿಪಕ್ಷ ನಾಯಕನ ಆಯ್ಕೆ ಬಳಿಕ ಹೊಸ ರಾಜ್ಯಾಧ್ಯಕ್ಷರ ನೇಮಕವೂ ಆಗಲಿದ್ದು, ಈ ಅಧಿವೇಶನದ ಬಳಿಕ ಅಧಿಕೃತ ಘೋಷಣೆ ಬರುವ ಸಾಧ್ಯತೆ ಇದೆ.

Latest Indian news

Popular Stories