ಎಚ್‌ಡಿ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆ; ವಿಶ್ರಾಂತಿ ಪಡೆಯಲು ವೈದ್ಯರ ಸೂಚನೆ

ಬೆಂಗಳೂರು: ಲಘು ಪಾರ್ಶ್ವವಾಯುವಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಆರೋಗ್ಯ ಸುಧಾರಿಸಿದ್ದು, ಅವರನ್ನು ಗುರುವಾರ ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. 

ಲಘು ಪಾರ್ಶ್ವವಾಯುವಿಗೆ ಒಳಗಾಗಿದ್ದ ಕುಮಾರಸ್ವಾಮಿ ಅವರು ಜಯನಗರದ ಅಪೋಲೋ ಆಸ್ಪತ್ರೆಗೆ ಬುಧವಾರ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. 

‘ಅವರಿಗೆ ಯಾವುದೇ ನರವೈಜ್ಞಾನಿಕ ಕೊರತೆ ಕಂಡುಬಂದಿಲ್ಲ ಮತ್ತು ಅವರ ಸಿಟಿ ಸ್ಕ್ಯಾನ್ ಕೂಡ ಸೆರೆಬ್ರಲ್ ಇನ್ಫಾರ್ಕ್ಟ್ ಸಮಸ್ಯೆ ಪರಿಹಾರವಾಗಿದೆ ಎಂದು ತೋರಿಸಿದೆ’ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಮತ್ತು ಘಟಕದ ಮುಖ್ಯಸ್ಥ ಗೋವಿಂದಯ್ಯ ಯತೀಶ್ ಹೇಳಿದರು.

ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ತಮ್ಮ ತಂದೆ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ‘ವೈದ್ಯರ ಸಲಹೆಯಂತೆ ಅವರು ಕೆಲವು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ನಂತರ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಗುರುವಾರ ಮಾಹಿತಿ ನೀಡಿದ್ದಾರೆ.

ತಂದೆಯ ಆರೋಗ್ಯ ಚೇತರಿಕೆಗಾಗಿ ಪ್ರೀತಿ, ವಾತ್ಸಲ್ಯದಿಂದ ಪ್ರಾರ್ಥನೆ ಮಾಡಿದ ಎಲ್ಲ ಕಾರ್ಯಕರ್ತರಿಗೂ, ರಾಜ್ಯದ ಜನರಿಗೂ ನಿಖಿಲ್ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.

Latest Indian news

Popular Stories