ಉ.ಕ | ಎಡೆಬಿಡದೆ ಸುರಿಯುತ್ತಿರುವ ಮಳೆ : ಜನ‌ಜೀವನ ಸ್ತಬ್ಧ : ನಾಳೆಯೂ ಕರಾವಳಿ ತಾಲೂಕುಗಳ ಶಾಲೆಗೆ ರಜೆ ಘೋಷಣೆ

ಕಾರವಾರ: ಕರಾವಳಿಯಲ್ಲಿ ಮಳೆ ಒಂದೇ ಸಮನೆ ಸುರಿಯುತ್ತಿದೆ .‌ಕಾರವಾರ, ಕುಮಟಾದಲ್ಲಿ ಎಡೆಬಿಡದೆ ರವಿವಾರ ಹಗಲು ಮಳೆ‌ ಸುರಿಯಿತು. ಅಪರಾಹ್ನ ಗಾಳಿ ಸಹಿತ ಮಳೆ ಬಿದ್ದ ಕಾರಣ ವಿದ್ಯುತ್ ವ್ಯತ್ಯಯ ಸಹ ಉಂಟಾಯಿತು.
ಜಿಲ್ಲೆಯ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ಶಾಲಾ ಮಕ್ಕಳ ಹಿತದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ ಮತ್ತು ಕಾರವಾರ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಜುಲೈ 8 ರಂದು ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯ ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ಗುಡ್ಡ ಕುಸಿತ ತೆರವು:
ಹೊನ್ನಾವರ ಕರ್ನಲ್ ಹಿಲ್ ಬಳಿ ಗುಡ್ಡದ ಪಾರ್ಶ್ವ ಭಾಗ ಕುಸಿದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ನಂತರ ಐಆರ್ ಬಿ ಯಂತ್ರಗಳು ಆಗಮಿಸಿ ರಸ್ತೆಗೆ ಬಿದ್ದಿದ್ದ ಕಲ್ಲು ಮಣ್ಣು ತೆಗೆದು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕಾರವಾರದ ಚೆಂಡಿಯಾ,ಇಡೂರು ಬಳಿ ಮನೆಗಳಿಗೆ ಮಳೆ ನೀರು ನುಗ್ಗಿದ ಕಾರಣ ಜಲದಿಗ್ಭಂಧನ ಉಂಟಾಗಿತ್ತು.
ಸುಫಾ ಹಿನ್ನೀರು, ದಾಂಡೇಲಿ, ಶಿರಸಿ, ಸಿದ್ದಾಪುರದಲ್ಲಿ ಸಹ ಮಳೆ ಸುರಿಯಿತು. ಜು.9ರ ತನಕ ಮಳೆ ಮುಂದುವರಿಯಲಿದೆ . ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಗಿದೆ. ಆಗಾಗ ಸಮುದ್ರ ಭಾಗದಲ್ಲಿ ಗಂಟೆಗೆ 55 ಕಿ.ಮೀ. ದಿಂದ 65 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಕೆ ನೀಡಿದೆ. ಅರಬೈಲು ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಚಿಗೆ ಇದ್ದ ಮರ ರಸ್ತೆಗೆ ಉರುಳಿ ಕೆಲ ಸಮಯ ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ಆಗಮಿಸಿ, ರಸ್ತೆಗೆ ನಿದ್ದ ಮರ ತೆರವು ಮಾಡಿದರು. ಮಳೆ ಕಾರಣಕ್ಕೆ ಜನ ಜೀವನ ಸ್ತಬ್ಧವಾಗಿತ್ತು .

ಎಲ್ಲೆಲ್ಲಿ ಎಷ್ಟು ಮಳೆ :
ಕಳೆದ 24 ತಾಸುಗಳಲ್ಲಿ ಅಂಕೋಲಾದಲ್ಲಿ ಅತೀ ಹೆಚ್ಚು ಮಳೆ ಶನಿವಾರ ಬೆಳಗಿನ ಜಾವ 8 ರ ಸಮಯಕ್ಕೆ 83.4 ಮಿಲಿ ಮೀಟರ್ ಮಳೆ ಸುರಿದಿತ್ತು , ಭಟ್ಕಳದಲ್ಲಿ 60.8 , ಹಳಿಯಾಳದಲ್ಲಿ 8 .9 , ಹೊನ್ನಾವರ 75.4 , ಕಾರವಾರ 80.4, ಕುಮಟಾ 60.1 ಮಿಲಿ ಮೀಟರ್ ಮಳೆ ಸುರಿದಿದೆ. ಮುಂಡಗೋಡ 10.6, ಸಿದ್ದಾಪುರ 31.8, ಶಿರಸಿಯಲ್ಲಿ 32.4,
ಸುಫಾದಲ್ಲಿ 70, ಯಲ್ಲಾಪುರದಲ್ಲಿ 39.2 ದಾಂಡೇಲಿಯಲ್ಲಿ 16.1 ಮಿಲಿ ಮೀಟರ್ ಮಳೆ ಸುರಿದಿದೆ. ಕಾಳಿ ನದಿಯು ಕದ್ರಾ ಬಳಿ ತುಂಬಿ ಹರಿಯುತ್ತಿದೆ. ಸುಫಾ ಜಲಾಶಯ ಭರ್ತಿಗೆ ಇನ್ನೂ 34 ಮೀಟರ್ ಬಾಕಿಯಿದೆ. ಮಳೆ 24 ತಾಸು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕರಾವಳಿ ತಾಲ್ಲೂಕುಗಳಲ್ಲಿ ಮಳೆ ಸುರಿಯುತ್ತಲೇ ಇದೆ. ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಹ ಸಜ್ಜಾಗಿದೆ .
……

Latest Indian news

Popular Stories