ಉಡುಪಿ: ಐವಾನ್ ಡಿಸೋಜಾ ಅವರು ಪರರಿಗಾಗಿ ಮಿಡಿಯುವ ಹೃದಯವಂತಿಕೆಯುಳ್ಳವರಾಗಿದ್ದು, ಜನಸಾಮಾನ್ಯರ ಹಕ್ಕುಗಳಿಗಾಗಿ ಧ್ವನಿ ಎತ್ತುವ ಕರಾವಳಿಯ ಧ್ವನಿಯಾಗಿದ್ದಾರೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಹೇಳಿದರು.
ಅವರು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ನೂತನವಾಗಿ ಚುನಾಯಿತರಾದ ಐವನ್ ಡಿಸೋಜಾ ಅವರಿಗೆ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್, ಉಡುಪಿ, ಸಿಎಸ್ಐ, ಯುಬಿಎಂಸಿ, ಆರ್ಥೊಡಾಕ್ಸ್ ಸಿರಿಯನ್ ಚರ್ಚ್ಗಳು, ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ , ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ, ಭಾರತೀಯ ಕಥೊಲಿಕ್ ಯುವ ಸಂಚಾಲನ, ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕರು ಜಂಟಿಯಾಗಿ ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂ, ಮಿಷನ್ ಕಾಂಪೌಂಡ್, ಉಡುಪಿ ಇಲ್ಲಿ ಭಾನುವಾರ ಆಯೋಜಿಸಿದ್ದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಚಿಕ್ಕಂದಿನಿಂದಲೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡಿರುವ ಐವನ್ ಅವರು ಧ್ವನಿ ಇಲ್ಲದವರ ಧ್ವನಿಯಾಗಿ ಅವರ ಹಕ್ಕುಗಳನ್ನು ಒದಗಿಸಿಕೊಡುವಲ್ಲಿ ಮುಂದೆಯೂ ತನ್ನ ಸೇವೆಯನ್ನು ಮುಂದುವರೆಸುವಂತಾಗಲಿ. ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳಿಗೆ ಸ್ಪಂದನೆ ನೀಡುವ ಅವರ ಕಾರ್ಯವೈಖರಿಯಿಂದ ಮುಂದೆಯೂ ಜನಮನ್ನಣೆಯನ್ನು ಪಡೆಯಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಐವಾನ್ ಡಿಸೋಜಾ ತಾನು ಎಲ್ಲಾ ವರ್ಗ ಧರ್ಮಗಳಿಗೆ ಶಾಸಕನಾಗಿ ಆಯ್ಕೆಯಾಗಿದ್ದು ಆದರೆ ನನ್ನ ಕ್ರೈಸ್ತ ಸಮುದಾಯಕ್ಕೆ ಅನ್ಯಾಯವಾಗುವ ಕೆಲಸ ಎಲ್ಲಿಯಾದರೂ ನಡೆದಲ್ಲಿ ಮೊದಲಿಗನಾಗಿ ದನಿ ಎತ್ತುವ ಕೆಲಸ ಮಾಡಲಿದ್ದೇನೆ. ರಾಜಕಾರಣ ಇಂದು ಹೂವಿನ ಹಾಸಿಗೆಯಾಗಿರದೆ ಮುಳ್ಳಿನ ಹಾಸಿಗೆ ಕೂಡ ಆಗಿದೆ.
ಇಂದು ದ್ವೇಷ, ಜಾತಿ ಧರ್ಮದ ಆಧಾರದಲ್ಲಿ ಕಾನೂನು ತಂದು ಜನರ ಬದುಕಿನಲ್ಲಿ ಸಮಸ್ಯೆ ತಂದಲ್ಲಿ ಅದರ ವಿರುದ್ದ ದನಿ ಎತ್ತಲಿದ್ದೇನೆ. ಹಿಂದೆ ಸದಸ್ಯನಾಗಿದ್ದಾಗ ಜಾತಿ ಮತ ಭೇದ ನೋಡದೆ ಸುಮಾರು 7 ಕೋಟಿ ರೂಪಾಯಿ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಯನ್ನು ತಂದ ಸಮಾಧಾನ ಇದೆ. ಅಭಿವೃದ್ಧಿ ಪರ ಕನಸುಕಂಡಾಗ ಜನರು ಎಂದಿಗೂ ಕೂಡ ನಮ್ಮ ಕೈಬಿಡುವುದಿಲ್ಲ ಮುಂದಿನ 6 ವರ್ಷಗಳ ಕಾಲ ಎಲ್ಲಾ ಸಮುದಾಯದ ಪರ ಕೆಲಸ ಮಾಡುವುದಾಗಿ ಹೇಳಿದರು.
ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಐವಾನ್ ಡಿಸೋಜರು ತಮ್ಮ ವಿದ್ಯಾರ್ಥಿ ಜೀವನದಿಂದಲೇ ತಮ್ಮ ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಳ್ಳದೆ ನಿರಂತರ ಜನಸೇವೆ ಮಾಡಿಕೊಂಡು ಬಂದವರು. ಮೊದಲ ಬಾರಿ ವಿಧಾನ ಪರಿಷತ್ ನಲ್ಲಿ ಸದಸ್ಯರಾಗಿದ್ದಾಗ ಅತೀ ಹೆಚ್ಚು ಪ್ರಶ್ನೆಗಳನ್ನು ಕೇಳುವುದರ ಮೂಲಕ ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದವರು. ಅವಕಾಶ ಸಿಕ್ಕಾಗ ಲಭ್ಯವಿದ್ದ ಅನುದಾನವನ್ನು ಎರಡು ಜಿಲ್ಲೆಗಳಿಗೂ ಒದಗಿಸಿದ್ದು, ನಂಬಿದ ಸಿದ್ದಾಂತದ ಮೇಲೆಯೇ ಇಂದು ಅವರಿಗೆ ಮತ್ತೊಮ್ಮೆ ಪರಿಷತ್ ಸದಸ್ಯರಾಗುವ ಅವಕಾಶ ಲಭಿಸಿದೆ ಎಂದರು.
ಸಿಎಸ್ ಐ ಕೆಎಸ್ ಡಿ ಉಡುಪಿ ಏರಿಯಾ ಕೌನ್ಸಿಲ್ ಇದರ ಏರಿಯಾ ಮುಖ್ಯಸ್ಥರಾದ ವಂ|ಐವಾನ್ ಡಿ ಸೋನ್ಸ್, ಉಡುಪಿ ಜಿಲ್ಲಾ ಫುಲ್ ಗೊಸ್ಪೆಲ್ ಪಾಸ್ಟರ್ ಅಸೋಸಿಯೇಶನ್ ಅಧ್ಯಕ್ಷರಾದ ಪಾಸ್ಟರ್ ಸೆಲ್ವಕುಮಾರ್, ಸೈಂಟ್ ಮೇರಿಸ್ ಸೀರಿಯ್ ಕ್ಯಾಥೆಡ್ರಲ್ ಬ್ರಹ್ಮಾವರ ಇದರ ಪ್ರತಿನಿಧಿ ವಂ|ಎಂಟನಿ ಡಿಸಿಲ್ವಾ, ಯುನಾಯ್ಟೆಡ್ ಬಾಸೆಲ್ ಮಿಶನ್ ಉಡುಪಿ ಜಿಲ್ಲಾ ಚರ್ಚ್ ಬೋರ್ಡ್ ಉಡುಪಿ, ದಕ ಮತ್ತು ಕೊಡಗು ಇದರ ಮುಖ್ಯಸ್ಥರಾದ ವಂ|ವಿಜಯ್ ಹಾರ್ವಿನ್, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ ಉಪಸ್ಥಿತರಿದ್ದರು., ಮಹಿಳಾ ಸಂಘಟನೆ ಅಧ್ಯಕ್ಷರಾದ ಗ್ರೇಸಿ ಕುವೆಲ್ಲೊ, ಯುನಾಯ್ಟೆಡ್ ಕ್ರಿಶ್ಚಿಯನ್ ಫೋರಂ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ, ಐಸಿವೈಎಮ್ ಅಧ್ಯಕ್ಷರಾದ ಗೊಡ್ವಿನ್ ಮಸ್ಕರೇನ್ಹಸ್ ಉಪಸ್ಥೀತರಿದ್ದರು.
ಕಾರ್ಯಕ್ರಮದ ಸಂಚಾಲಕರಾದ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಂಘಟಕಿ ವೆರೋನಿಕಾ ಕರ್ನೆಲಿಯೋ ಸನ್ಮಾನಿತರ ಪರಿಚಯ ಮಾಡಿದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯನಕ್ಷರಾದ ಸಂತೋಷ್ ಕರ್ನೆಲಿಯೋ ಧನ್ಯವಾದವಿತ್ತರು. ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.