ವಡೋದರಾ: ವಡೋದರಾದ ಹರ್ನಿ ಲೇಕ್ ದೋಣಿ ದುರಂತ ಸಂಬಂಧ 18 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ಹರ್ನಿ ಲೇಕ್ ಮ್ಯಾನೇಜರ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹರ್ನಿ ಲೇಕ್ ನ ಮುಖ್ಯ ಗುತ್ತಿಗೆದಾರ ಪರೇಶ್ ಶಾ ತಲೆಮರೆಸಿಕೊಂಡಿದ್ದಾನೆ.
ನಿನ್ನೆ ರಾತ್ರಿ ಸಂಜೆ ಸಂಭವಿಸಿದ ದುರಂತದಲ್ಲಿ 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸಾವನ್ನಪ್ಪಿದ್ದರು. 16 ಜನರ ಸಾಮರ್ಥ್ಯದ ಬೋಟ್ ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಲಾಗಿತ್ತು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ದೋಣಿಯಲ್ಲಿ 23 ವಿದ್ಯಾರ್ಥಿಗಳು ಮತ್ತು ನಾಲ್ವರು ಶಿಕ್ಷಕರು ಸೇರಿದ್ದಾರೆ. ಇನ್ನುಳಿದಂತೆ 11 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ರಕ್ಷಿಸಲಾಗಿದೆ.
ಕೆಲವು ವಿದ್ಯಾರ್ಥಿಗಳು ಮಾತ್ರ ಲೈಫ್ ಜಾಕೆಟ್ ಧರಿಸಿದ್ದು, ಉಳಿದವರು ಲೈಫ್ ಜಾಕೆಟ್ ಇಲ್ಲದೇ ಇರುವುದು ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ನಂತರ ವಡೋದರಾ ತಲುಪಿದ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಈ ಪ್ರಕರಣದ ತನಿಖೆಯನ್ನು ಕಲೆಕ್ಟರ್ ಎಬಿ ಗೋರ್ ಅವರಿಗೆ ಹಸ್ತಾಂತರಿಸಿದ್ದಾರೆ. 10 ದಿನದೊಳಗೆ ತನಿಖೆ ಪೂರ್ಣಗೊಳಿಸಿ ಸರಕಾರಕ್ಕೆ ಹಸ್ತಾಂತರಿಸುವಂತೆ ಸೂಚನೆ ನೀಡಲಾಗಿದೆ.
ಬೋಟ್ ಚಾಲಕ ಮತ್ತು ನಿರ್ವಾಹಕನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರ ಎಫ್ಐಆರ್ ನಲ್ಲಿ M/s ಕೋಟಿಯಾ ಪ್ರಾಜೆಕ್ಟ್ ಮ್ಯಾನೇಜರ್ ಬಿನೀತ್ ಕೋಟಿಯಾ, ಹಿತೇಶ್ ಕೋಟಿಯಾ, ಗೋಪಾಲದಾಸ್ ಶಾ, ವತ್ಸಲ್ ಶಾ, ಜತಿನ್ ಕುಮಾರ್ ಹರಿಲಾಲ್ ದೋಷಿ, ದೀಪೆನ್ ಶಾ, ಧರ್ಮಿಲ್ ಶಾ, ರಶ್ಮಿಕಾಂತ್ ಸಿ ಪ್ರಜಾಪತಿ, ನೇಹಾ ಡಿ ದೋಷಿ, ನೂತನ್ ಬೆನ್ ಪಿ ಶಾ, ತೇಜಲ್ ಆಶಿಶ್ ಕುಮಾರ್ ದೋಷಿ, ಭೀಮ್ ಸಿಂಗ್ ಸೇರಿದಂತೆ 18 ಮಂದಿ ಹೆಸರು ಸೇರಿಸಲಾಗಿದೆ.
ದುರಂತದಲ್ಲಿ ಮೃತಪಟ್ಟವರನ್ನು ಮೊಹಮ್ಮದ್ ಅಯಾನ್, ಮೊಹಮ್ಮದ್ ಅನೀಸ್ ಗಾಂಧಿ(13), ರೋಶ್ನಿ ಪಂಕಜಭಾಯಿ ಶಿಂಧೆ(10), ರುತ್ವಿ ಪ್ರತೀಕ್ ಶಾ(10), ಜಹಬಿಯಾ ಮೊಹಮ್ಮದ್ ಯೂನಸ್ ಸುಬೇದಾರ್(10), ವಿಶ್ವಕುಮಾರ್ ಕಲ್ಪೇಶಭಾಯ್ ನಿಜಾಮ(10), ರಾಯನ್, ಹರುನ್ ಖಲೀಫಾ(10), ಸಕೀನಾ ಸೋಕತ್ ಅಬ್ದುಲ್ರಸೂರ್(9), ಫಲ್ಗುಣಿಬೆನ್ ಮನೀಶ್‌ಭಾಯ್ ಪಟೇಲ್(45), ಅಲಿಸಾಬಾನು ಮಹಮದ್ ಒಮರ್ ಕೊಠಾರಿವಾಲಾ(9), ಮುವ್ವಾಜಾ ಮೊಹಮ್ಮದ್ ಮಹಿರ್ ಶೇಖ್(8), ನ್ಯಾನ್ಸಿ ರಾಹುಲ್ ಮಾಲಿ(8), ಅಯತ್ ಅಲ್ತಾಫ್ ಹುಸೇನಿ ಮನ್ಸೂರಿ( 9), ಆಸಿಯಾ ಫಾರೂಕ್ ಖಲೀಫಾ(11), ಛಾಯಾಬೆನ್ ಸೂರ್ತಿ(45).
ಮಾಹಿತಿ ಪ್ರಕಾರ, ವಡೋದರಾ ನಗರದ ಹೊರವಲಯದಲ್ಲಿ ದೋಣಿ ದುರಂತ ಸಂಭವಿಸಿದೆ. ಹರ್ನಿ ತಾಲಾಬ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಬಲಿಯಾದ ಮಕ್ಕಳು ನ್ಯೂ ಸನ್‌ರೈಸ್ ಶಾಲೆಗೆ ಸೇರಿದ್ದಾರೆ. ದೋಣಿಯಲ್ಲಿದ್ದ ವಿದ್ಯಾರ್ಥಿಗಳು ವಿಹಾರಕ್ಕೆ ತೆರಳಿದ್ದರು. ಎಲ್ಲಾ ಮಕ್ಕಳು ಮತ್ತು ಶಿಕ್ಷಕರು ಸೆಲ್ಫಿಗಾಗಿ ದೋಣಿಯ ಒಂದು ಬದಿಗೆ ಬಂದಿದ್ದು ಇದರಿಂದಾಗಿ ದೋಣಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.