ಉತ್ತಮ ರಾಜಕೀಯ ನಾಯಕನಾಗುವುದು ಹೇಗೆ?: ದೇಶದ ಅತಿ ಕಿರಿಯ ಸಂಸದ ಸಾಗರ್ ಖಂಡ್ರೆಗೆ ರಾಜಕೀಯ ಪಾಠ ಮಾಡಿದ ಸಿಎಂ ಸಿದ್ದು

ಕಲಬುರಗಿ: ಬೀದರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ದೇಶದ ಅತಿ ಕಿರಿಯ ಸಂಸದ ಸಾಗರ ಖಂಡ್ರೆ (26) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ಶಾಸಕರಾಗುವುದು ಹೇಗೆ ಎಂಬುದರ ಕುರಿತು ಪಾಠ ಹೇಳಿದ್ದಾರೆ.

ಕಾವೇರಿ ಅಧಿಕೃತ ನಿವಾಸದಲ್ಲಿ ತಮ್ಮನ್ನು ಭೇಟಿಯಾಗಿದ್ದ ಸಾಗರ್ ಖಂಡ್ರೆ ಅವರಿಗೆ ಆಶೀರ್ವಾದ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜಕೀಯದ ಕುರಿತು ಪಾಠ ಮಾಡಿದರು.

ಸದನದಲ್ಲಿ ಸದಾ ಹಾಜರಿದ್ದು, ಎಲ್ಲ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಶ್ರದ್ಧಯಿಂದ ಆಲಿಸಿ, ಸೂಕ್ತವಾಗಿ ಸ್ಪಂದಿಸುವವರು ಮಾತ್ರ ಉತ್ತಮ ಸಂಸದೀಯ ಪಟುವಾಗಿ ಬೆಳೆಯಲು ಸಾಧ್ಯ.ಅಧಿವೇಶನದಲ್ಲಿ ಎಲ್ಲರ ಮಾತನ್ನು ಆಲಿಸಿ, ಸಂಸತ್ತಿನ ಗ್ರಂಥಾಲಯಕ್ಕೆ ಹೋಗಿ, ಸಂಸತ್ತಿನಲ್ಲಿ ಹಿರಿಯ ನಾಯಕರು ನಡೆಸುವ ಉತ್ತಮ ಚರ್ಚೆಗಳನ್ನು ಓದಿ, ದೇಶ, ರಾಜ್ಯ ಮತ್ತು ಪಕ್ಷಕ್ಕೆ ನಿಷ್ಠರಾಗಿರಿ ಎಂದು ಸಿದ್ದರಾಮಯ್ಯ ಅವರು ಸಾಗರ ಅವರಿಗೆ ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಖೂಬಾ ವಿರುದ್ಧ ಪ್ರಚಂಡ ಬಹುಮತದಿಂದ ಜಯ ಸಾಧಿಸಿರುವುದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಸಚಿವ ರಹೀಮ್ ಖಾನ್, ಮಾಜಿ ಸಚಿವ ರಾಜಶೇಖರ ಪಾಟೀಲ, ಕಲಬುರಗಿ ಮಾಜಿ ಮೇಯರ್ ಶರಣಕುಮಾರ ಮೋದಿ ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಭೇಟಿ ಬಳಿಕ ಸಾಗರ್ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಶುಕ್ರವಾರ ಬೆಂಗಳೂರಿಗೆ ಬಂದಿದ್ದ ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಕೂಡ ಸಾಗರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.

ಸಾಗರ್ ಅವರು ಕಾನೂನು ಪದವೀಧರರಾಗಿದ್ದು, ಭಾಲ್ಕಿಯ ಶಾಂತಿವರ್ಧಕ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ, ರಾಜಕಾರಣಿಗಳ ಕುಟುಂಬದಿಂದ ಬಂದವರಾಗಿದ್ದಾರೆ. ಅವರ ತಂದೆ ಪ್ರಸ್ತುತ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅವರ ತಾತ ಭೀಮಣ್ಣ ಖಂಡ್ರೆ ಕೂಡ ಮಾಜಿ ಸಚಿವರಾಗಿದ್ದರು.

ಸಾಗರ್ ಅವರು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಮಾಜಿ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು 1,28,875 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಖೂಬಾ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಈಶ್ವರ್ ಖಂಡ್ರೆ ಮತ್ತು 2013 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ದಿವಂಗತ ಧರಂ ಸಿಂಗ್ ಅವರನ್ನು ಸೋಲಿಸಿದ್ದರು.

Latest Indian news

Popular Stories