ಹುಬ್ಬಳ್ಳಿ: ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪನೆ ವಿಚಾರದಲ್ಲಿ ಸರ್ಕಾರದ ಪಾತ್ರವಿಲ್ಲ; ಗೃಹ ಸಚಿವ ಪರಮೇಶ್ವರ್

ಬೆಂಗಳೂರು: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಿರ್ಧಾರವನ್ನು ಅಲ್ಲಿನ ಪಾಲಿಕೆ ಕೈಗೊಳ್ಳಲಿದ್ದು, ಇದರಲ್ಲಿ ಸರ್ಕಾರದ ಪಾತ್ರವಿರುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಶುಕ್ರವಾರ ಹೇಳಿದರು.

ನಗರದಲ್ಲಿಂದು ಪೊಲೀಸ್ ಕಮಿಷನರೇಟ್ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರುಹುಬ್ಬಳ್ಳಿಯ ಈದ್ಗಾ ಮೈದಾನ ಜಾಗ ಪಾಲಿಕೆಗೆ ಸಂಬಂಧಿಸಿದ್ದು. ಅಲ್ಲಿ ಈ ಬಾರಿಯೂ ಗಣೇಶೋತ್ಸವ ಆಚರಣೆ ಮಾಡಬೇಕೋ, ಇಲ್ಲವೋ ಎಂಬುದನ್ನು ಪಾಲಿಕೆಯೇ ನಿರ್ಧಾರ ಮಾಡಲಿದೆ. ಅವರು ಸನ್ನಿವೇಶ, ಪರ, ವಿರೋಧ ಪರಿಶೀಲನೆ ಮಾಡಿ ನಿರ್ಧಾರ ಮಾಡಬೇಕು. ಪರಿಸ್ಥಿತಿ ಅವಲೋಕಿಸಿ ಪೊಲೀಸರು ಸರ್ಕಾರಕ್ಕೆ ಪತ್ರ ಬರೆಯುವವರೆಗೆ ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿರುವುದಿಲ್ಲ ಎಂದು ಹೇಳಿದರು.

“ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ನೀಡುವ ಕುರಿತು ಇತರೆ ಸಮುದಾಯಗಳಿಂದ ಭಿನ್ನಾಭಿಪ್ರಾಯಗಳು ಆರಂಭವಾಗಿರಬಹುದು. ಹೀಗಾಗಿ ಸ್ಥಳೀಯ ಪೊಲೀಸರು ಕಾನೂನು ಸುವ್ಯವಸ್ಥೆಯನ್ನು ಪರಿಗಣಿಸಿ ಸರಕಾರಕ್ಕೆ ಪತ್ರ ಬರೆಯಲಿದ್ದಾರೆ. ಅಲ್ಲಿಯವರೆಗೆ ಈ ವಿಚಾರದಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ. ಪೊಲೀಸರು ನೀಡಿದ ಮಾಹಿತಿಗಳ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಿಳಿಸಿದರು,

ಇದೇ ವೇಳೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸದಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಸಂಪ್ರದಾಯ ಮುಂದುವರಿಸುವ ವಿಚಾರದಲ್ಲಿ ಗೊಂದಲ ಬೇಡ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ವಿರೋಧ ಕುರಿತು ಪ್ರತಿಕ್ರಿಯಿಸಿ, ಮೈದಾನವು ಸಾರ್ವಜನಿಕ ಆಸ್ತಿಯಾಗಿದ್ದು, ಎಚ್‌ಡಿಎಂಸಿ ಒಡೆತನದಲ್ಲಿದೆ, ಅದು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಮೈದಾನವು ಮುಸ್ಲಿಂ ಸಮುದಾಯದವರಿಗೆ ಸೇರಿದ್ದಲ್ಲ. ಮುಸ್ಲಿಮರು ಅನಗತ್ಯ ಉದ್ವಿಗ್ನತೆಯನ್ನು ಸೃಷ್ಟಿಸಬಾರದು ಎಂದು ತಿಳಿಸಿದ್ದಾರೆ.

ಈದ್ಗಾ ಮೈದಾನದಲ್ಲಿ 11 ದಿನಗಳ ಕಾಲ ಗಣೇಶೋತ್ಸವ ಆಚರಿಸಲು ಅವಕಾಶ ನೀಡುವಂತೆ ವಿವಿಧ ಸಂಘಟನೆಗಳು ಮನವಿ ಮಾಡಿಕೊಳ್ಳುತ್ತಿದೆ.

ಕಳೆದ ವರ್ಷ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ನಿರ್ಧಾರ ಕೈಗೊಂಡಿತ್ತು.

Latest Indian news

Popular Stories