ಧಾರವಾಡ: ಅಸ್ವಸ್ಥಗೊಂಡಿದ್ದ ಒಂದೂವರೆ ವರ್ಷದ ಬಾಲಕ ಗುರುವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಘೋಷಿಸಿ ಮನೆಗೆ ಕರೆತರಲಾಗಿತ್ತು, ಸಂಜೆ ವೇಳೆಗೆ ಜೀವಂತವಾಗಿ ಎದ್ದು ಕುಳಿತಿದ್ದ, ಆದರೆ, ಕುಟುಂಬ ಸದಸ್ಯರ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಶುಕ್ರವಾರ ಸಂಜೆ ಬಾಲಕ ಅಸು ನೀಗಿದ್ದಾನೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪೂರದ ಒಂದೂವರೆ ವರ್ಷದ ಮಗು ಆಕಾಶ್ ಬಸವರಾಜ್ ಪೂಜಾರ ಹೀಗೆ ಪವಾಡಸದೃಶವಾಗಿ ಬದುಕುಳಿದು ಮತ್ತೆ ಸಾವಿನ ಕದ ತಟ್ಟಿದ್ದಾನೆ.
ಬಸವರಾಜ ಪೂಜಾರ್ ಅವರು ತಮ್ಮ ಮಗ ಆಕಾಶ್‌ನನ್ನು ಉಸಿರಾಟ ನಾಳದ ಸೋಂಕಿನಿಂದ ಸೋಮವಾರ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗುರುವಾರ ಸಂಜೆ ಬಾಲಕನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಪೂಜಾರ್ ಕುಟುಂಬದ ಸದಸ್ಯರು ಅದೇ ದಿನ ಶವವನ್ನು ಮನೆಗೆ ಕೊಂಡೊಯ್ದರು. ಸಂಜೆ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಹುಡುಗ ಜೀವಂತವಾಗಿರುವುದು ಕಂಡು ಬಂದಿದೆ. ಕೂಡಲೇ ಬಾಲಕನನ್ನು ನವಲಗುಂದದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಬಾಲಕ ಆರೋಗ್ಯವಾಗಿದ್ದಾನೆ ಎಂದು ತಿಳಿಸಿದರು. ಆದರೆ, ವೈದ್ಯರು ತಮ್ಮ ಮಗನನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಪೂಜಾರ್‌ಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಹುಡುಗ ಜೀವಂತವಾಗಿದ್ದ ಮತ್ತು ಪೂಜಾರ್ ಅವರ ಕೋರಿಕೆಯ ಆಧಾರದ ಮೇಲೆ ಬಾಲಕನನ್ನು ಗುರುವಾರ ಡಿಸ್ಟಾರ್ಜ್ ಮಾಡಲಾಗಿದೆ. ಸ್ಟೆಂಟ್ ಸೋಂಕಿಗೆ ಒಳಗಾಗಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೆಂಟಿಲೇಶನ್ ನಲ್ಲಿದ್ದ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ವೈದ್ಯರು ಪೂಜಾರ್ ಹಾಗೂ ಆತನ ಕುಟುಂಬ ಸದಸ್ಯರೊಂದಿಗೆ ಬಾಲಕನ ಆರೋಗ್ಯ ಸ್ಥಿತಿ ಕುರಿತು ಚರ್ಚಿಸಿದ್ದರು ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಅಂತರತಾನಿ ತಿಳಿಸಿದ್ದಾರೆ.
ಬಾಲಕ ಕ್ಷೇಮವಾಗಿದ್ದ ಸ್ವಲ್ಪ ದ್ರವಾಹಾರ ಸೇವಿಸಿದ್ದ, ಆದರೆ ಸಂಜೆಯ ವೇಳೆಗೆ ಮತ್ತೆ ಆಘಾತಕಾರಿ ಸುದ್ದಿ ಬಂದೆರಗಿತ್ತು, ಆಕಾಶ್ ಸಾವನ್ನಪ್ಪಿದ್ದ ಎಂದು ಪೂಜಾರ್ ನೆರೆಹೊರೆಯವರು ಹೇಳಿದ್ದಾರೆ.