ಟೊರೊಂಟೊ: ಭಾರತವನ್ನು ಪ್ರಚೋದಿಸಲು ಅಥವಾ ಉದ್ವಿಗ್ನತೆ ಹೆಚ್ಚಿಸಲು ಎದುರು ನೋಡುತ್ತಿಲ್ಲ ಎಂದು ಮಂಗಳವಾರ ಹೇಳಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ವಿಚಾರವನ್ನು “ಅತ್ಯಂತ ಗಂಭೀರವಾಗಿ” ತೆಗೆದುಕೊಳ್ಳುವಂತೆ ಭಾರತವನ್ನು ಒತ್ತಾಯಿಸಿದ್ದಾರೆ.
ಜೂನ್‌ನಲ್ಲಿ ನಡೆದ ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ “ಭಾರತ ಸರ್ಕಾರದ ಏಜೆಂಟರು” ಭಾಗಿಯಾಗಿದ್ದಾರೆ ಎಂಬ ಆರೋಪದ ನಂತರ ಕೆನಡಾ ಮತ್ತು ಭಾರತವು ಒಬ್ಬ ಹಿರಿಯ ರಾಜತಾಂತ್ರಿಕರನ್ನು ಉಚ್ಚಾಟಿಸಿದ ಬೆನ್ನಲ್ಲೇ ಟುಡೋ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವನ್ನು ಭಾರತ ಸರ್ಕಾರ ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ನಾವು ಅದನ್ನು ಮಾಡುತ್ತೇವೆ. ನಾವು ಪ್ರಚೋದಿಸುವ ಅಥವಾ ಉದ್ವಿಗ್ನತೆ ಹೆಚ್ಚಿಸಲು ನೋಡುತ್ತಿಲ್ಲ. ಎಲ್ಲವನ್ನೂ ಸ್ಪಷ್ಟಪಡಿಸಲು ಮತ್ತು ಸರಿಯಾದ ಪ್ರಕ್ರಿಯೆಗಳಿವೆ ಎಂಬ ಖಚಿತತೆಗೆ ನಾವು ಭಾರತ ಸರ್ಕಾರದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಅವರು ಹೇಳಿದರು.
ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ, ತಲೆಗೆ 10 ಲಕ್ಷ ರೂಪಾಯಿ ನಗದು ಬಹುಮಾನವನ್ನು ಹೊಂದಿದ್ದ ನಿಜ್ಜರ್ (45) ನನ್ನು ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಪಶ್ಚಿಮ ಕೆನಡಾದ ಪ್ರಾಂತ್ಯದ ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದು ಹಾಕಿದ್ದರು.
ಸೋಮವಾರ ಹೌಸ್ ಆಫ್ ಕಾಮನ್ಸ್ ನಲ್ಲಿ ಮಾತನಾಡಿದ ಟುಡ್ರೋ, ಕೆನಡಾದ ಭದ್ರತಾ ಏಜೆನ್ಸಿಗಳು ಭಾರತ ಸರ್ಕಾರದ ಏಜೆಂಟರು ಮತ್ತು ಕೆನಡಾದ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯ ನಡುವಿನ ಸಂಭಾವ್ಯ ಸಂಪರ್ಕದ ವಿಶ್ವಾಸಾರ್ಹ ಆರೋಪಗಳ ಕುರಿತು ತನಿಖೆ ನಡೆಸುತ್ತಿವೆ ಎಂದು ಟ್ರೂಡೊ ಹೇಳಿದರು. ಟ್ರುಡೋ ಅವರ ಸಂಸತ್ತಿನಲ್ಲಿ ನೀಡಿದ ಹೇಳಿಕೆ ನಂತರ ಹಿರಿಯ ಭಾರತೀಯ ರಾಜತಾಂತ್ರಿಕರನ್ನು”ಹೊರಹಾಕಲು ಆದೇಶ ನೀಡಿರುವುದನ್ನು ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ದೃಢಪಡಿಸಿದ್ದರು.
ಟುಡ್ರೋ ಅವರ ಆರೋಪಗಳು ಮತ್ತು ಜೋಲಿಯ ಟೀಕೆಗಳಿಗೆ ಮಂಗಳವಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಭಾರತ ಅವುಗಳು “ಅಸಂಬದ್ಧ ಮತ್ತು ಪ್ರೇರಿತ” ಎಂದು ಕರೆದಿದೆ. ಕೆನಡಾದ ರಾಜತಾಂತ್ರಿಕರನ್ನು ಮುಂದಿನ ಐದು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಕೇಳಿದೆ. ಕೆನಡಾ ಮೂಲದ ನಿಜ್ಜರ್ ಅವರನ್ನು ಜುಲೈ 2020 ರಲ್ಲಿ ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಅಡಿಯಲ್ಲಿ ಭಾರತವು ‘ಭಯೋತ್ಪಾದಕ’ ಎಂದು ಘೋಷಿಸಿತ್ತು. ದೇಶದಲ್ಲಿನ ಅವರ ಆಸ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಸೆಪ್ಟೆಂಬರ್ 2020 ರಲ್ಲಿ ಮುಟ್ಟುಗೋಲು ಹಾಕಿಕೊಂಡಿತ್ತು.ಆತನ ವಿರುದ್ಧ 2016ರಲ್ಲಿ ಅವರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಸರ್ರೆಯ ಸ್ಥಳೀಯ ಪೊಲೀಸರು ನಿಜ್ಜರ್‌ನನ್ನು 2018 ರಲ್ಲಿ ಆತನ ಭಯೋತ್ಪಾದನೆಯ ಒಳಗೊಳ್ಳುವಿಕೆಯ ಶಂಕೆಯ ಮೇಲೆ ತಾತ್ಕಾಲಿಕವಾಗಿ ಗೃಹಬಂಧನದಲ್ಲಿ ಇರಿಸಿದ್ದರು ಆದರೆ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಭಾರತ ಮತ್ತು ಕೆನಡಾ ನಡುವಿನ ವ್ಯಾಪಾರ ಮಾತುಕತೆಗಳನ್ನು ರದ್ದುಗೊಳಿಸುವುದರೊಂದಿಗೆ ಇತ್ತೀಚಿಗೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿದೆ.