
ಭಾರತ-ನ್ಯೂಝಿಲೆಂಡ್ ಸೆಮಿಫೈನಲ್ ನೋಡಲು ಸ್ಟೇಡಿಯಂ ಹೋಗುವ ಮುನ್ನ ಎಚ್ಚರ: ಈ ವಸ್ತುಗಳು ನಿಷೇಧ
ಇಂಡಿಯಾ ಮತ್ತು ನ್ಯೂಝಿಲ್ಯಾಂಡ್ ನಡುವೆ ಇಂದು ಹೈವೊಲ್ಟೇಜ್ ಸೆಮಿಫೈನಲ್ ಪಂದ್ಯಾವಳಿ ನಡೆಯಲಿದೆ. ಈ ಪಂದ್ಯಕ್ಕೆ ಅಭಿಮಾನಿಗಳಿಗೆ ಕೆಲವು ವಸ್ತು ನಿಷೇಧಿಸಲಾಗಿದೆ.
ವಾಂಖೆಡೆ ಸ್ಟೇಡಿಯಂ ಪ್ರವೇಶಿಸುವಾಗ ಫ್ಯಾನ್ಸ್ ಕೆಲವು ವಸ್ತುಗಳನ್ನು ತರಬಾರದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಈ ಪಂದ್ಯಕ್ಕಾಗಿ ಒಟ್ಟು ಏಳು ಉಪ ಪೊಲೀಸ್ ಆಯುಕ್ತರು, 200 ಅಧಿಕಾರಿಗಳು ಮತ್ತು 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವಾಂಖೆಡೆ ಸ್ಟೇಡಿಯಂನ ಎಲ್ಲಾ ಹತ್ತು ಗೇಟ್ಗಳ ಮುಂಭಾಗದ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಪೊಲೀಸರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ಭದ್ರತಾ ದೃಷ್ಟಿಯಿಂದ ಅಭಿಮಾನಿಗಳು ಸ್ಟೇಡಿಯಂ ಒಳಗೆ ಪೆನ್ನು, ಪೆನ್ಸಿಲ್, ಮಾರ್ಕರ್, ಖಾಲಿ ಪೇಪರ್, ಬ್ಯಾನರ್, ಪೋಸ್ಟರ್, ಬ್ಯಾಗ್, ಪವರ್ ಬ್ಯಾಂಕ್, ನಾಣ್ಯ, ಸುಡುವ ವಸ್ತುಗಳು, ತಂಬಾಕು ಉತ್ಪನ್ನಗಳನ್ನು ತರದಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಕಳೆದ 3 ದಿನಗಳಿಂದ ಈ ಪಂದ್ಯ ವೀಕ್ಷಿಸಲು ದೇಶ ವಿದೇಶಗಳಿಂದ ಕ್ರಿಕೆಟ್ ಪ್ರೇಮಿಗಳು ಮುಂಬೈಗೆ ಆಗಮಿಸಿದ್ದರು. ಕೆಲವು ಕ್ರಿಕೆಟ್ ಪ್ರೇಮಿಗಳು ವಿಶ್ವಕಪ್ನ ಪ್ರತಿಕೃತಿ ಮತ್ತು ದೊಡ್ಡ ಬ್ಯಾಟ್ನೊಂದಿಗೆ ಪಂದ್ಯವನ್ನು ವೀಕ್ಷಿಸಲು ಬಂದಿದ್ದಾರೆ.




