ಅಮೆರಿಕದಲ್ಲಿ ಸಿಖ್ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು ಆರೋಪ: ಸಮಗ್ರ ತನಿಖೆಯಾಗಬೇಕು; ಭಾರತಕ್ಕೆ ಅಮೆರಿಕಾ ಆಗ್ರಹ

ವಾಷಿಂಗ್ಟನ್: ಭಾರತ, ಅಮೆರಿಕ ಕಾರ್ಯತಂತ್ರದ ಪಾಲುದಾರ ಹಾಗೂ ಅಮೆರಿಕದ ಪ್ರಜೆಯಾಗಿರುವ ಖಲಿಸ್ತಾನಿ ಸಂಘಟನೆಯ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸಂಚು ರೂಪಿಸಿದವರನ್ನು ಶಿಕ್ಷೆಗೆ ಗುರಿಯಾಗಿಸಬೇಕೆಂದು ಅಮೆರಿಕಾ ಆಗ್ರಹಿಸಿದೆ.

ಈ ಸಂಬಂಧ ಶ್ವೇತಭವನದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಅವರು, ಭಾರತವು ಒಂದು ಕಾರ್ಯತಂತ್ರದ ಪಾಲುದಾರ. ನಾವು ಆ ಕಾರ್ಯತಂತ್ರದ ಪಾಲುದಾರಿಕೆಯನ್ನು ಆಳಗೊಳಿಸುತ್ತಿದ್ದೇವೆ. ಭಾರತ- ಅಮೆರಿಕ ಕ್ವಾಡ್ ಸದಸ್ಯ ರಾಷ್ಟ್ರಗಳಾಗಿವೆ. ಈ ಎರಡೂ ರಾಷ್ಟ್ರಗಳು ಅನೇಕ ಸಮಸ್ಯೆಗಳ ಕುರಿತು ಮಾತುಕತೆ ನಡೆಸುತ್ತಿವೆ. ಅದು ನಿರಂತರವಾಗಿ ಮುಂದುವರಿಯುವುದನ್ನು ನಾವು ನೋಡಲು ಬಯಸುತ್ತೇವೆ. ಇದೇ ಸಮಯದಲ್ಲಿ ಈ ಆರೋಪಗಳ ಗಂಭೀರತೆಯನ್ನು ನಾವು ಖಂಡಿತವಾಗಿ ಗುರುತಿಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಪನ್ನೂನ್ ಹತ್ಯೆ ಪ್ರಯತ್ನ ಆರೋಪ ಎರಡೂ ರಾಷ್ಟ್ರಗಳ ಮೇಲೆ ಪರಿಣಾಮ ಬೀರಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಾವು ಅದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕೆಂದು ಬಯಸುತ್ತೇವೆ. ಅಲ್ಲದೆ ಪ್ರಕರಣದ ಹಿಂದೆ ಯಾರಿದ್ದಾರೋ ಅವರನ್ನು ನೇರ ಹೊಣೆಗಾರರನ್ನಾಗಿ ಮಾಡಬೇಕು ಎಂದು ಒತ್ತಾಯಿಸುತ್ತೇವೆಂದು ತಿಳಿಸಿದ್ದಾರೆ.

ಸದ್ಯ ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಭಾರತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದು ಸಂತಸದ ವಿಷಯವಾಗಿದೆ. ಹೀಗಾಗಿ ತನಿಖೆ ಪೂರ್ಣಗೊಳ್ಳದೇ ಈ ಬಗ್ಗೆ ಮಾತನಾಡುವುದಿಲ್ಲ ಎಂದರು.

ಕಳೆದ ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ನಂತರ ಘೋಷಿತ ಖಲಿಸ್ತಾನಿ ಉಗ್ರ ಹಾಗೂ ನಿಷೇಧಿತ ಸಂಘಟನೆ ಸಿಖ್ಸ್ ಫಾರ್ ಜಸ್ಟಿಸ್‍ನ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ರೂಪಿಸಿದ್ದ ಸಂಚನ್ನು ಭೇದಿಸಲಾಗಿತ್ತು.

Latest Indian news

Popular Stories