ಅಂರ್ಜಾತಿ ವಿವಾಹ: ದಂಪತಿಗೆ ಆರು ಲಕ್ಷ ದಂಡ ವಿಧಿಸಿ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಚಾಮರಾಜನಗರ, ಮಾ.5 : ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅಂತರ್ಜಾತಿ ವಿವಾಹವಾದ ದಂಪತಿಗೆ ತಮ್ಮ ಗ್ರಾಮದಲ್ಲಿ ದಂಡ ಮತ್ತು ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.

ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ದಂಪತಿಗಳು ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಗ್ರಾಮಸ್ಥರಿಗೆ ಅವರ ವಿಭಿನ್ನ ಜಾತಿಯ ಬಗ್ಗೆ ಇತ್ತೀಚೆಗೆ ತಿಳಿದುಬಂದಿದೆ.

ಗ್ರಾಮಸ್ಥರು ದಂಪತಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಿ ಗ್ರಾಮದಲ್ಲಿ ಬಹಿಷ್ಕಾರ ಹಾಕಿದ್ದರು. ಅವಮಾನ ತಾಳಲಾರದೆ ದಂಪತಿ ಮಾರ್ಚ್ 1 ರಂದು ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದಾರೆ.

ಉಪ್ಪಾರ ಸೆಟ್ಟಿ ಸಮುದಾಯಕ್ಕೆ ಸೇರಿದ ಗೋವಿಂದರಾಜು, ಮಂಡ್ಯ ಮೂಲದ ಪರಿಶಿಷ್ಟ ಜಾತಿಗೆ ಸೇರಿದ ಶ್ವೇತಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಮದುವೆಯಾಗಲು ನಿರ್ಧರಿಸಿದಾಗ, ಹುಡುಗ ಮತ್ತು ಹುಡುಗಿಯ ಮನೆಯವರು ವಿರೋಧವಿಲ್ಲದೆ ಒಪ್ಪಿಗೆ ಸೂಚಿಸಿದರು. ಅವರ ವಿವಾಹವನ್ನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

ಗೋವಿಂದರಾಜು ಅವರು ಮಳವಳ್ಳಿಯಲ್ಲಿ ನೆಲೆಸಿದ್ದರು, ಆದರೆ ಆಗಾಗ್ಗೆ ಕುಣಗಲ್ಲಿಗೆ ತಮ್ಮ ಹೆಂಡತಿಯೊಂದಿಗೆ ಪೋಷಕರನ್ನು ಭೇಟಿಯಾಗಲು ಬರುತ್ತಿದ್ದರು. ಕಳೆದ ತಿಂಗಳು ದಂಪತಿಗಳು ಅಲ್ಲಿಗೆ ಬಂದಾಗ, ಶ್ವೇತಾ ತನ್ನ ನೆರೆಹೊರೆಯವರೊಂದಿಗೆ ಮಾತನಾಡುತ್ತಾ, ತಾನು ದಲಿತೆ  ಎಂದು ಬಹಿರಂಗಪಡಿಸಿದ್ದಳು.

ವಿಷಯ ಗ್ರಾಮದ ಹಿರಿಯರಿಗೆ ತಲುಪಿ ಫೆ.23ರಂದು ಸಭೆ ನಡೆಸಿ ದಂಪತಿಯ ಪೋಷಕರನ್ನು ಕರೆಸಿ 3 ಲಕ್ಷ ದಂಡ ವಿಧಿಸಿ ಮಾರ್ಚ್ 1ರೊಳಗೆ ದಂಡ ಕಟ್ಟುವಂತೆ ತಿಳಿಸಿದ್ದಾರೆ.

ಈ ಸಂಬಂಧ ಗ್ರಾಮದ 12 ಮಂದಿ ವಿರುದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ವಿಷಯ ತಿಳಿದ ಹಿರಿಯರು ದಂಡದ ಮೊತ್ತವನ್ನು 6 ಲಕ್ಷ ರೂ.ಗಳಿಗೆ ಹೆಚ್ಚಿಸಿ ಗೋವಿಂದರಾಜು ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕಿದ್ದಾರೆ.  ಗ್ರಾಮದಿಂದ ಪಡಿತರ, ತರಕಾರಿ, ಹಾಲು, ನೀರು ಖರೀದಿಸಬಾರದು ಎಂದು ಗ್ರಾಮಸ್ಥರು ಕುಟುಂಬವನ್ನು ಗ್ರಾಮದಿಂದ ಹೊರಗೆ ಕಳುಹಿಸಿದ್ದಾರೆ.

ಈ ಕುರಿತು ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

Latest Indian news

Popular Stories