ಇಸ್ರೋಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಬೆಂಗಳೂರು: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್‌ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಗುರುವಾರ ಪೀಣ್ಯದಲ್ಲಿರುವ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ ಕಚೇರಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ.

ಇಸ್ರೋ ಅಧ್ಯಕ್ಷರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ- 3 ಯಶಸ್ವಿಯಾಗಿ ಇಳಿಯುವ ಮೂಲಕ ಇಸ್ರೋ ಅಪೂರ್ವವಾದ ಸಾಧನೆ ಮಾಡಿದೆ. ಭಾರತೀಯರೆಲ್ಲರಿಗೂ ಇದು ಹೆಮ್ಮೆಯ ಕ್ಷಣ. ಈ ಅಸಾಧಾರಣ ಸಾಧನೆ ಮಾಡಿದ ಪ್ರತಿಯೊಬ್ಬ ವಿಜ್ಞಾನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾರಂಭದ ದಿನಗಳಲ್ಲೇ ಬೆಂಬಲ ಮತ್ತು ನೆರವು ನೀಡಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು. ಈ ಮಧ್ಯೆ ಗುರುವಾರ ಬೆಳಗ್ಗೆ ಇಸ್ರೋ ಕಚೇರಿಗೆ ಖುದ್ದು ಮುಖ್ಯಮಂತ್ರಿ ಭೇಟಿ ನೀಡಲಿದ್ದಾರೆ.

ಇಸ್ರೋ ವಿಜ್ಞಾನಿಗಳನ್ನು ಸಮ್ಮಾನಿಸಿದ ಡಿಕೆಶಿ
ಡಿಸಿಎಂ ಡಿ.ಕೆ. ಶಿವಕುಮಾರ್‌ ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಅಭಿನಂದಿಸಿದರು. ಅನಂತರ ಕೆಲಹೊತ್ತು ಚರ್ಚಿಸಿದರು. ರಾತ್ರಿ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ತೆರಳಿದ ಡಿ.ಕೆ. ಶಿವಕುಮಾರ್‌, ಯೋಜನೆ ಯಶಸ್ಸಿನ ರೂವಾರಿಗಳಾದ ಇಸ್ರೋ ಅಧ್ಯಕ್ಷ ಸೋಮನಾಥ್‌, ಯು.ಆರ್‌. ರಾವ್‌ ಬಾಹ್ಯಕಾಶ ಕೇಂದ್ರದ ನಿರ್ದೇಶಕ ಶಂಕರನ್‌, ಯೋಜನೆ ನಿರ್ದೇಶಕ ವೀರಮುತ್ತು, ಸಹಾಯಕ ಯೋಜನೆ ನಿರ್ದೇಶಕಿ ಕಲ್ಪನಾ, ಯಂತ್ರ ನಿರ್ವಹಣೆ ನಿರ್ದೇಶಕ ಶ್ರೀಕಾಂತ್‌ ಮತ್ತಿತರ ವಿಜ್ಞಾನಿಗಳನ್ನು ಸಮ್ಮಾನಿಸಿ ಅಭಿನಂದಿಸಿದರು.

Latest Indian news

Popular Stories