ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿಸಲು ಸಮಯದ ಚೌಕಟ್ಟು ಸಿದ್ಧಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ಪ್ರಜಾಪ್ರಭುತ್ವದ ಮರುಸ್ಥಾಪನೆಯ ಮಹತ್ವವನ್ನು ಒತ್ತಿ ಹೇಳಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಿಜೆಪಿ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಮಂಗಳವಾರ ಮುಂದುವರಿಸಿತು.
“ನೀವು ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಬಹುದೇ? ಕೇಂದ್ರಾಡಳಿತ ಪ್ರದೇಶವೊಂದು ರಾಜ್ಯವಾಗಿ ಬದಲಾಗಬಹುದೇ?” ಎಂದು ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಪೀಠ ಪ್ರಶ್ನಿಸಿತು. ಇದಕ್ಕೆ ಸ್ಪಷ್ಟ ಪ್ರತಿಕ್ರಿಯೆ ನೀಡಿದ ತುಷಾರ್ ಮೆಹ್ತಾ ಅವರು ಅಸ್ಸಾಂ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ಉದಾಹರಣೆ ನೀಡಿದರು. ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ್ದು ತಾತ್ಕಾಲಿಕ ಕ್ರಮ. ಭವಿಷ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ವಾಪಸ್ ರಾಜ್ಯದ ಸ್ಥಾನಮಾನ ಪಡೆದುಕೊಳ್ಳಲಿದೆ ಎಂದು ಹೇಳಿದರು.
“ನಾನು ಸುಪ್ರೀಂಕೋರ್ಟ್ ಸೂಚನೆಗಳನ್ನು ಪರಿಗಣಿಸಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಸ್ಥಿತಿಯು ಶಾಶ್ವತ ಸನ್ನಿವೇಶವಾಗಿರುವುದಿಲ್ಲ. ನಾಡಿದ್ದು (ಆಗಸ್ಟ್ 31) ನಾನು ಈ ಬಗ್ಗೆ ‘ಸಕಾರಾತ್ಮಕ ಹೇಳಿಕೆ’ ನೀಡಲಿದ್ದೇನೆ. ಆದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಉಳಿಯಲಿದೆ” ಎಂದು ಹೇಳಿದರು. ಈ ವಿಚಾರ ಕುರಿತಂತೆ ಗುರುವಾರ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆ ನಡೆಯಲಿದೆ.
ಪ್ರಜಾಪ್ರಭುತ್ವ ಮರಳಿಸುವುದು ಮುಖ್ಯ
2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಅದೇ ವೇಳೆ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿತ್ತು. ಇಲ್ಲಿನ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ಬಳಿಕ ರಾಜ್ಯ ಸ್ಥಾನಮಾನವನ್ನು ಮರಳಿ ಸ್ಥಾಪಿಸಲಾಗುವುದು ಎಂದು ಟೀಕೆಗಳಿಗೆ ಸರ್ಕಾರ ಪ್ರತಿಕ್ರಿಯೆ ನೀಡಿತ್ತು.
“ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಮರು ಸ್ಥಾಪಿಸುವ ಬಗ್ಗೆ ಸಂಸತ್‌ನ ಕಲಾಪದಲ್ಲಿ ಹೇಳಿಕೆ ನೀಡಲಾಗಿತ್ತು. ಇದರ ಪ್ರಯತ್ನಗಳು ನಡೆಯುತ್ತಿವೆ. ಪರಿಸ್ಥಿತಿ ಸಹಜಗೊಂಡ ನಂತರ ಸಾಧ್ಯವಾಗಲಿದೆ” ಎಂದು ಮೆಹ್ತಾ ಅವರು ಕೋರ್ಟ್‌ಗೆ ತಿಳಿಸಿದರು.
ಇದು
ಎಷ್ಟರಮಟ್ಟಿಗೆ ತಾತ್ಕಾಲಿಕ? ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವಾಗ ಚುನಾವಣೆ ನಡೆಯಲಿದೆ? ಇದಕ್ಕೆ ನೀಲನಕಾಶೆ ಇದೆಯೇ? ನೀವು ಅದನ್ನು ನಮಗೆ ತೋರಿಸಬೇಕು. ರಾಜ್ಯವೊಂದನ್ನು ನೀವು ಹೇಗೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದೀರಿ ಮತ್ತು ಇದು ಎಷ್ಟು ದಿನ ಮುಂದುವರಿಯುತ್ತದೆ ಎಂಬುದನ್ನು ತೋರಿಸಲು ನಮ್ಮ ಮುಂದೆ ಹೇಳಿಕೆ ನೀಡಬೇಕು. ಪ್ರಜಾಪ್ರಭುತ್ವದ ಮರುಸ್ಥಾಪನೆ ಮುಖ್ಯವಾಗಿದೆ” ಎಂದು ಕೋರ್ಟ್ ಹೇಳಿತು.
ಸೋಮವಾರ ವಿಚಾರಣೆ ವೇಳೆ, ಜಮ್ಮು ಮತ್ತು ಕಾಶ್ಮೀರದ ಈಗಿನ ಸ್ಥಾನಮಾನವು ಶಾಶ್ವತವಲ್ಲ, ಅದರ ರಾಜ್ಯ ಸ್ಥಾನ ವಾಪಸ್ ನೀಡಲಾಗುತ್ತದೆ ಎಂದು ಕೋರ್ಟ್‌ಗೆ ಸರ್ಕಾರ ತಿಳಿಸಿತ್ತು. “ಅಗತ್ಯಬಿದ್ದರೆ, ಕೆಲ ಸಮಯದವರೆಗೂ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿಯೇ ಒಕ್ಕೂಟದ ಅಡಿಯಲ್ಲಿ ಇರುತ್ತದೆ. ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತೆ ರಾಜ್ಯವಾಗಲಿದೆ” ಎಂದು ಸಾಲಿಸಿಟರ್ ಜನರಲ್ ಹೇಳಿದ್ದರು.