ಸರಕಾರದ ಮೀಸಲಾತಿ ಪಡೆಯಲು ಧರ್ಮ ಮುಖ್ಯ ಅಲ್ಲ- ಕೆ. ಜಯಪ್ರಕಾಶ್ ಹೆಗ್ಡೆ

ಕೆ.ಎಂ.ಎ. ವತಿಯಿಂದ ವಿರಾಜಪೇಟೆಯಲ್ಲಿ ನಡೆದ ಸಮಾರಂಭದಲ್ಲಿ ನುಡಿ

ಮಡಿಕೇರಿ, ಸೆ.26: ಸರಕಾರದ ಮೀಸಲಾತಿ ಸೌಲಭ್ಯ ಪಡೆಯಲು ಫಲಾನುಭವಿಗಳ ಧರ್ಮ ಮುಖ್ಯವಲ್ಲ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜನಾಂಗದವರು ಯಾವುದೇ ಧರ್ಮದವರಾದರೂ ಮೀಸಲಾತಿಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸೇಂಟ್ ಆನ್ಸ್ ಪ್ಯಾರಿಸ್ ಸಭಾಂಗಣದಲ್ಲಿ ನಡೆದ ಕೆಎಂಎ ಪ್ರತಿಭಾ ಪುರಸ್ಕಾರ-2023 ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಆದರೆ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗಾಗಿ ಕೇವಲ ಮೀಸಲಾತಿಯನ್ನೇ ಸಂಪೂರ್ಣವಾಗಿ ಅವಲಂಬಿಸಬಾರದು. ಆಸಕ್ತಿಯಿಂದ ಓದಿ ಹೆಚ್ಚು ಅಂಕ ಪಡೆಯುವುದರ ಮೂಲಕ ಮೆರಿಟ್ ನಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ತಿಳಿಸಿದರು.

ಮೀಸಲಾತಿ ಪಟ್ಟಿಯಲ್ಲಿ ಅರ್ಹತೆ ಹೊಂದಿರುವ ಸಮುದಾಯಗಳ ವಿದ್ಯಾರ್ಥಿಗಳಾದರೂ ಓದಿನಲ್ಲಿ ಮೆರಿಟ್ ಮೂಲಕ ಮುಂದೆ ಬಂದರೆ ಅವರ ಹಿಂದೆ ಇರುವವರು ಮೀಸಲಾತಿ ಸೌಲಭ್ಯದ ಮೂಲಕ ಮುಂದೆ ಬರಲು ಅವಕಾಶವಿದೆ. ಈ ನಿಸ್ವಾರ್ಥ ತತ್ವವನ್ನು ರೂಡಿಸಿಕೊಂಡರೆ ಪ್ರತಿಯೊಬ್ಬರೂ ಶಿಕ್ಷಣದಲ್ಲಿ ಮುಂದೆ ಬಂದಾಗಂತಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಜಯಪ್ರಕಾಶ್ ಹೆಗ್ಡೆ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಗುರಿಗಳಿರಬೇಕು. ನಿರ್ದಿಷ್ಟ ಗುರಿಯಿಡೆಗೆ ಸಾಗುವ ಮಾರ್ಗ ಕೆಲವು ಕಾರಣಗಳಿಂದ ಬದಲಾದರೂ ಗುರಿಯನ್ನು ಮಾತ್ರ ಬದಲಿಸಬಾರದು. ವಿದ್ಯಾರ್ಥಿಗಳು ಭೂತಕಾಲದ ಇತಿಹಾಸವನ್ನು ಅರ್ಥೈಸಿಕೊಂಡು ವರ್ತಮಾನದಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಂಡರೆ ಮಾತ್ರ ಭವಿಷ್ಯವನ್ನು ಮತ್ತಷ್ಟು ಸುಭದ್ರಗೊಳಿಸಬಹುದು. ಸಾಧನೆ ಮಾಡಿದವರನ್ನು ಮಾತ್ರ ಸಮಾಜ ಗುರುತಿಸುತ್ತದೆ. ಆದ್ದರಿಂದ ಅತ್ಯಮೂಲ್ಯವಾದ ಬದುಕನ್ನು ವ್ಯರ್ಥಗೊಳಿಸಬಾರದು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ತಂಬಂಡ ವಿಜಯ್ ಪೂಣಚ್ಚ, 1893ರ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಬಲಾಡ್ಯರಾಗಿದ್ದ ಜಮ್ಮ ಮಾಪಿಳ್ಳೆಗಳು 20ನೇ ಶತಮಾನದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂತು. 18ನೇ ಶತಮಾನದಲ್ಲಿ ಕೊಡಗು ಜಿಲ್ಲೆಯ ಒಟ್ಟು 191 ಪೊಲೀಸ್ ಸಿಬ್ಬಂದಿಗಳ ಪೈಕಿ 63 ಮಂದಿ ಸಿಬ್ಬಂದಿಗಳು ಕೊಡವ ಮುಸ್ಲಿಮರಾಗಿದ್ದರು. ನಂತರ ಬದಲಾದ ಪರಿಸ್ಥಿತಿಯಲ್ಲಿ ಅತಂತ್ರ ಸ್ಥಿತಿ ಎದುರಾಗಿ ನಲುಗಿ ಹೋಗುವಂತಾಯಿತು. ಈಗ ಕೊಡವ ಮುಸಲ್ಮಾನರ ಬಗ್ಗೆ ವಿಶೇಷವಾದ ಅಧ್ಯಯನ ನಡೆಸುವ ಅಗತ್ಯವಿದೆ. ಈ ಮೂಲಕ ಸಂವಿಧಾನಾತ್ಮಕ ರಕ್ಷಣೆ ಪಡೆಯಲು ಈ ಜನಾಂಗ ಅರ್ಹವಾಗಿದೆ ಎಂದು ಹೇಳಿದರು.

ಕೊಡಗಿನ ಜಮ್ಮಾ ಎಂಬ ಗೌರವದ ಸಂಕೇತ ಇಲ್ಲಿನ ಮೂಲ ನಿವಾಸಿಗಳ ಅಂತಶಕ್ತಿಯಾಗಿದೆ. 1805ರಲ್ಲಿ ಅಂದಿನ ಕೊಡಗು ರಾಜರಿಂದ ಜನಾಂಗವಾರು ದೊರೆತ ಜಮ್ಮಾ ಕೊಡಗಿನ ಪ್ರಮುಖ 8 ಜನಾಂಗಗಳಿಗೆ ಮಾತ್ರ ಸೀಮಿತವಾಗಿದೆ. ಈ 8 ಜನಾಂಗಗಳ ಪೈಕಿ ಕೊಡವ ಮುಸ್ಲಿಮರೂ (ಜಮ್ಮಾ ಮಾಪಿಳ್ಳೆ) ಒಂದಾಗಿದ್ದು, ಐಬೋಕ್ಲು ಎಂಬ ಜನಾಂಗ ಸಂಪೂರ್ಣವಾಗಿ ನಶಿಸಿ ಹೋದ ಕಾರಣ ಇದೀಗ ಕೊಡವರು ಸೇರಿದಂತೆ ಜನಾಂಗವಾರು ಜಮ್ಮಾ ಪಡೆದ 7 ಅಧಿಕೃತ ಸಮುದಾಯಗಳು ಮಾತ್ರ ಕೊಡಗಿನಲ್ಲಿ ಅಸ್ತಿತ್ವದಲ್ಲಿದೆ ಎಂದು ಪ್ರೊ. ವಿಜಯ್ ಪೂಣಚ್ಚ ಚರಿತ್ರೆಯನ್ನು ಉಲ್ಲೇಖಿಸಿ ವಿವರಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿರಾಜಪೇಟೆ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಾತನಾಡಿ, ಕೊಡವ ಮುಸಲ್ಮಾನರಿಗೂ ಕೊಡಗಿನ ಮಣ್ಣಿಗೂ ಅವಿನಾಭಾವ ಸಂಬಂಧವಿದೆ. ಕೊಡಗಿನ ಪ್ರಗತಿಗೆ ಇವರ ಕೊಡುಗೆಯು ಅಪಾರ ಮಟ್ಟದಲ್ಲಿದೆ. ಕೊಡಗಿನಲ್ಲಿ ಹುಟ್ಟಿ ಬೆಳೆದವರು ಕೊಡವ ಮುಸ್ಲಿಮರ ಆತ್ಮೀಯ ಸಂಬಂಧವನ್ನು ಹೊರತುಪಡಿಸಲು ಸಾಧ್ಯವೇ ಇಲ್ಲ. ಜಿಲ್ಲೆಯ ಕೋಮು ಸಾಮರಸ್ಯ ಕಾಪಾಡುವಲ್ಲಿಯೂ ಕೊಡವ ಮುಸ್ಲಿಮರ ಪಾತ್ರ ದೊಡ್ಡದಿದೆ. ಮುಂದೆಯೂ ಕೊಡಗಿನ ಸರ್ವ ಧರ್ಮಿಯರ ನಡುವಿನ ಅನ್ಯೋನ್ಯತೆ ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರಲ್ಲದೆ, ಕೊಡವ ಮುಸಲ್ಮಾನರು ಎದುರುಸುತ್ತಿರುವ ಸಾಮಾಜಿಕ ಸಮಸ್ಯೆ ಬಗೆ ತನಗೆ ಅರಿವಿದ್ದು, ಎಲ್ಲಾ ನ್ಯಾಯೋಚಿತ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಈಡೇರಿಸಲು ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್ ನ ಸ್ಥಾಪಕ ಅಧ್ಯಕ್ಷರಾದ ಕುವೆಂಡ ವೈ. ಹಂಝತುಲ್ಲಾ ಅವರು ಸಾಂಪ್ರದಾಯಿಕ ದಫ್ ಬಾರಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರಂಭದಲ್ಲಿ ಮಂಡೆಂಡ ಎಂ.ಮುಶ್ರಫ್ ಕಿರಾಅತ್ ಪಠಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಡಾ. ಜೋಯಿಪೆರ ಎ. ಕುಂಜ್ಹಬ್ದುಲ್ಲಾ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ, ಮುಸ್ಕಾನ್ ಸೂಫಿ, ಶರ್ಫುದ್ದೀನ್ ಕಾರ್ಯಕ್ರಮ ನಿರ್ವಹಿಸಿದರೆ, ನಿರ್ದೇಶಕರಾದ ಮೀತಲತಂಡ ಎಂ. ಇಸ್ಮಾಯಿಲ್ ವಂದಿಸಿದರು.

Latest Indian news

Popular Stories