ಗೋಣಿಕೊಪ್ಪಲು: ಮುಸ್ಲಿಮರು ಯಾವುದೇ ರಾಜಕೀಯ ಪಕ್ಷದ ಗುಲಾಮರಲ್ಲ. ಅದರಲ್ಲೂ ಜೆಡಿಎಸ್ ಎಂಬ ಜಾತಿವಾದಿ ಪಕ್ಷ ಮುಸ್ಲಿಮರಿಗೆ ಯಾವ ಕಾಲಕ್ಕೂ ಅನಿವಾರ್ಯವಾಗಿರಲಿಲ್ಲ ಎಂದು ಹೇಳಿರುವ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷರಾದ ಆಲೀರ ಎಂ. ರಶೀದ್, ಕಳೆದ ಚುನಾವಣೆ ಸಂದರ್ಭದಲ್ಲಿ ತನ್ನ ಸಹಕಾರವಿಲ್ಲದೆ ಸರ್ಕಾರ ರಚನೆ ಸಾಧ್ಯವಿಲ್ಲ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ, ಚುನಾವಣೆಯ ಫಲಿತಾಂಶದ ಬಳಿಕ ಹತಾಶರಾಗಿ ಮುಸ್ಲಿಮರ ಕುರಿತು ತುಚ್ಚವಾಗಿ ಮಾತನಾಡುತ್ತಿರುವುದು ತೀವ್ರ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸ್ವಾರ್ಥ ರಾಜಕಾರಣಕ್ಕಾಗಿ ಸಂದರ್ಭಕ್ಕೆ ತಕ್ಕಂತೆ ಆಯಾ ಮುಖವಾಡಗಳನ್ನು ಧರಿಸಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದ ಕುಮಾರಸ್ವಾಮಿ ಅವರ ನಿಜ ಬಣ್ಣ ಈಗ ಬಯಲಾಗಿದೆ. ತಾನು ಈ ಹಿಂದೆ ಅಲ್ಪಸಂಖ್ಯಾತರ ರಕ್ಷಕರೆಂದು ಹೇಳಿಕೊಳ್ಳುತ್ತಿದ್ದ ಕುಮಾರಸ್ವಾಮಿ, ರಾಜ್ಯದ ಮುಸ್ಲಿಮರಿಗಾಗಿ ಯಾವ ಕೊಡುಗೆ ನೀಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದ್ದಾಗ ಅವರ ಪಕ್ಷದಿಂದ ಕನಿಷ್ಠ ಒಬ್ಬ ಮುಸ್ಲಿಂ ನಾಯಕನನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಳ್ಳದ ಕುಮಾರಸ್ವಾಮಿ ಅವರಿಗೆ ಈಗ ಮುಸ್ಲಿಮರ ಕುರಿತು ಹೇಳಿಕೆ ನೀಡಲು ಯಾವ ನೈತಿಕತೆ ಉಳಿದಿದೆ. ಇದುವರೆಗೂ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಕಟುವಾಗಿ ಟೀಕಿಸುತ್ತಿದ್ದ ಕುಮಾರಸ್ವಾಮಿ, ಕರ್ನಾಟಕದಲ್ಲಿ ಅವರ ಪಕ್ಷ ನೆಲ ಕಚ್ಚುವ ಹಂತ ತಲುಪಿದಾಗ ಕೇವಲ ಪಕ್ಷ ಉಳಿಸಿಕೊಳ್ಳಲಷ್ಟೇ ಬಿಜೆಪಿಯೊಂದಿಗೆ ಮೈತ್ರಿಯ ನಾಟಕವಾಡುತ್ತಿರುವುದು ಕರ್ನಾಟಕದ ಜನತೆಗೆ ತಿಳಿಯದಿರುವ ವಿಷಯವೇನಲ್ಲ. ಈ ಕಾರಣದಿಂದ ಕುಮಾರಸ್ವಾಮಿ ಅವರ ಪಕ್ಷಕ್ಕೆ ರಾಜ್ಯದಲ್ಲಿ ಇನ್ನು ಉಳಿಗಾಲವಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಶೀಘ್ರದಲ್ಲೇ ಪತನವಾಗಲಿದೆ ಎಂದು ಹೇಳಿಕೊಳ್ಳುತ್ತಿರುವ ಕುಮಾರಸ್ವಾಮಿ ಇದೀಗ ಈ ಭ್ರಮೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ತಮ್ಮ ಪಕ್ಷದ ಅಸ್ತಿತ್ವಕ್ಕಾಗಿ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರುವ ಕುಮಾರಸ್ವಾಮಿ ಮುಸ್ಲಿಮರ ಕುರಿತು ಕೀಳಾಗಿ ಮಾತನಾಡುತ್ತಿರುವುದು ಮಾಜಿ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿರುವ ರಶೀದ್, ಅಗತ್ಯ ಬಂದಾಗ ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಸಾಮರ್ಥ್ಯ ಮುಸ್ಲಿಮರಿಗೆ ಇದೆ. ಇದಕ್ಕಾಗಿ ಕುಮಾರಸ್ವಾಮಿ ಅಂತಹ ಗೋಸುಂಬೆ ರಾಜಕಾರಣಿಗಳ ನೆರವು ಅಗತ್ಯವಿಲ್ಲ ಎಂದು ಅವರು ಹೇಳಿಕೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.