ವಾರಣಾಸಿ: ಭಾರತೀಯ ಪುರಾತತ್ವ ಇಲಾಖೆಯಿಂದ ನಡೆಯುತ್ತಿರುವ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ನಿಲ್ಲಿಸುವಂತೆ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯ ಮನವಿಯನ್ನು ಇಲ್ಲಿನ ನ್ಯಾಯಾಲಯವು ತಿರಸ್ಕರಿಸಿದೆ.
ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು, ಸಮೀಕ್ಷೆಗೆ ಈಗಾಗಲೇ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಒಪ್ಪಿಗೆ ದೊರೆತಿದೆ ಎಂದು ಜಿಲ್ಲಾ ಸರ್ಕಾರಿ ವಕೀಲ ರಾಜೇಶ್ ಮಿಶ್ರಾ ಹೇಳಿದರು.
ಹೀಗಾಗಿ ನ್ಯಾಯಾಲಯದಿಂದ ಈ ವಿಚಾರದಲ್ಲಿ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
17ನೇ ಶತಮಾನದ ಮಸೀದಿಯನ್ನು ಹಿಂದೂ ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಇಲ್ಲಿನ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ.
ಎಎಸ್‌ಐ ಸಮೀಕ್ಷೆಯನ್ನು ನಿಗದಿತ ನಿಯಮಗಳಿಗೆ ವಿರುದ್ಧವಾಗಿ ನಡೆಸಲಾಗುತ್ತಿದ್ದು, ಇದನ್ನು ನಿಲ್ಲಿಸಬೇಕು ಎಂದು ಮಸೀದಿ ಆಡಳಿತ ಸಮಿತಿಯು ಜಿಲ್ಲಾ ನ್ಯಾಯಾಲಯದ ಮುಂದೆ ಪ್ರತಿಪಾದಿಸಿದೆ ಎಂದು ಮಿಶ್ರಾ ಹೇಳಿದರು. ದಾವೆದಾರರಿಗೆ ಯಾವುದೇ ನೋಟಿಸ್ ನೀಡಲಾಗಿಲ್ಲ ಮತ್ತು ಯಾವುದೇ ಶುಲ್ಕವನ್ನು ವಿಧಿಸಲಾಗಿಲ್ಲ ಎಂದು ಮಸೀದಿ ಸಮಿತಿ ವಾದಿಸಿತು.
ಅರ್ಜಿದಾರರಿಗೆ ಯಾವುದೇ ಹೊಸ ಷರತ್ತುಗಳನ್ನು ವಿಧಿಸುವಂತಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದ್ದಾರೆ. “ಭಾರತೀಯ ಪುರಾತತ್ವ ಇಲಾಖೆಯು ಖಾಸಗಿ ಸಂಸ್ಥೆಯಲ್ಲ. ಅದು ಸರ್ಕಾರಿ ಕೆಲಸ ಮಾಡುತ್ತಿದೆ. ಸಮೀಕ್ಷೆಯ ವೆಚ್ಚ ಭರಿಸುವಂತೆ ಒತ್ತಾಯಿಸುವುದು ಸರಿಯಲ್ಲ’ ಎಂದು ನ್ಯಾಯಾಧೀಶರು ಗುರುವಾರ ಹೇಳಿದರು.