ನವದೆಹಲಿ: ಸೆಪ್ಟೆಂಬರ್ 18 ರಿಂದ ಐದು ದಿನ ಸಂಸತ್ತಿನ ವಿಶೇಷ ಅಧಿವೇಶನವನ್ನು ಸರ್ಕಾರ ಕರೆದಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ತಿಳಿಸಿದ್ದಾರೆ.
ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿಯಲ್ಲಿ ಜಿ- 20 ಶೃಂಗಸಭೆಯ ನಂತರ ನಡೆಯಲಿರುವ ಅಧಿವೇಶನದ ಕಾರ್ಯಸೂಚಿ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸೆಪ್ಟೆಂಬರ್ 18 ರಿಂದ 22 ರವರೆಗೆ ಸಂಸತ್ತಿನ ವಿಶೇಷ ಅಧಿವೇಶನ (17 ನೇ ಲೋಕಸಭೆಯ 13 ನೇ ಅಧಿವೇಶನ ಮತ್ತು ರಾಜ್ಯಸಭೆಯ 261 ನೇ ಅಧಿವೇಶನ) ಕರೆಯಲಾಗಿದ್ದು, ಒಟ್ಟು ಐದು ಅವಧಿಗಳು ಇರಲಿವೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಫಲಪ್ರದ ಚರ್ಚೆಗಳನ್ನು ಎದುರು ನೋಡಲಾಗುತ್ತಿದೆ ಎಂದು ಅವರು X ನಲ್ಲಿ ತಿಳಿಸಿದ್ದಾರೆ.