ಬೆಂಗಳೂರು/ನವದೆಹಲಿ:ಲೋಕಸಭೆಯ ಚುನಾವಣೆ ಮುಗಿದು ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸೋಮವಾರದಿಂದ ನೂತನ ಲೋಕಸಭೆಯ ಅಧಿವೇಶನ ಆರಂಭವಾಗಿದೆ. ಅಧಿವೇಶನದಲ್ಲಿ ಕರ್ನಾಟಕದಿಂದ ಆಯ್ಕೆಯಾದ 28 ಮಂದಿ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಿದರು. ನೂತನ ಸಂಸದ ಕಾಗೇರಿಯವರನ್ನು ಹೊರತುಪಡಿಸಿ ಕೇಂದ್ರ ಸಚಿವರಾದ ಕುಮಾರಸ್ವಾಮಿ ಸೇರಿ ಉಳಿದೆಲ್ಲಾ ಸಂಸದರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.
ಕೇಂದ್ರ ಸಚಿವರಾದ ಎಚ್‌ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ಸಾಗರ್ ಖಂಡ್ರೆ (ಬೀದರ್), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಮೈಸೂರು-ಕೊಡಗು), ಪಿ.ಸಿ.ಮೋಹನ್ (ಬೆಂಗಳೂರು ಸೆಂಟ್ರಲ್), ಡಾ.ಸಿ.ಎನ್.ಮಂಜುನಾಥ್ (ಬೆಂಗಳೂರು ಗ್ರಾಮಾಂತರ), ಬಸವರಾಜ ಬೊಮ್ಮಾಯಿ (ಹಾವೇರಿ) ಮತ್ತಿತರರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಬಹುತೇಕರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ) ಸಂವಿಧಾನದ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ದಕ್ಷಿಣ ಕನ್ನಡದ ನೂತನ ಲೋಕಸಭಾ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಅವರು ತುಳುನಾಡಿನ ದೈವ-ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು. ಜೊತೆಗೆ ಪ್ರಮಾಣವಚನ ಕೊನೆಯಲ್ಲಿ ತುಳುಭಾಷೆಯಲ್ಲಿ ಮಾತೆರೆಗ್ಲಾ ಸೊಲ್ಮೆಲು (ಎಲ್ಲರಿಗೂ ನಮನಗಳು) ಎಂದೂ ಹೇಳಿದ್ದು, ಇದಕ್ಕೆ ತುಳುನಾಡಿನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಇದೇ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿರುವ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಮಾತ್ರ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿ ಚರ್ಚೆ ಹುಟ್ಟು ಹಾಕಿದ್ದಾರೆ. ಲೋಕಸಭೆಯ ಹಂಗಾಮಿ ಸಭಾಧ್ಯಕ್ಷ ಭತೃಹರಿ ಮಹತಾಬ್ ನೂತನ ಸಂಸದರಿಗೆ ಪ್ರಮಾಣವಚನ ಬೋಧಿಸಿದರು.