ಹೆದ್ದಾರಿಯಲ್ಲಿ ಚೆಲ್ಲಿದ ಡೀಸೆಲ್ : ಅನಾಹುತ ತಪ್ಪಿಸಿದ ಗ್ರಾ. ಪಂ. ಮಾಜಿ ಅಧ್ಯಕ್ಷ
ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಚೆಲ್ಲಿದ ಪರಿಣಾಮ ಕೆಲ ವಾಹನಗಳು ಬಿದ್ದ ಘಟನೆ ಇಂದು ಬೆಳಗ್ಗೆ ಸುಂಟಿಕೊಪ್ಪ -ಮಡಿಕೇರಿ ನಡುವಿನ ಬೋಯಿಕೇರಿ ಯಲ್ಲಿ ನಡೆದಿದೆ.
ಕಡಗದಾಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಟಿ. ಜಯಣ್ಣ ಹಾಗೂ ಸ್ಥಳೀಯರ ಸಾಕಾಲಿಕ ಕಾರ್ಯದಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಬೋಯಿಕೇರಿ ಶಾಲೆಯ ಮುಂಭಾಗದಿಂದ ಬಲ್ಯಾಂಡ್ರಿ ತೋಟದ ಮುಂದಿನ ತಿರುವಿನವರೆಗೆ ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗಿದೆ. ಈ ಸಮಯದಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನಗಳು ನಿಯಂತ್ರಣ ಕಳೆದುಕೊಂಡು ಜಾರಿ ಬಿದ್ದಿವೆ. ವಿಷಯವರಿತು ಧಾವಿಸಿ ಬಂದ ಕಡಗದಾಳು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಟಿ. ಜಯಣ್ಣ ಹಾಗೂ ಸ್ಥಳೀಯರು ಟ್ಯಾಂಕರ್ ಅನ್ನು ತಡೆದು ನಿಲ್ಲಿಸಿ, ಡೀಸೆಲ್ ಸೋರಿಕೆಯಾಗಿದ್ದ ರಸ್ತೆಯುದ್ಧಕ್ಕೂ ಗಿಡಗಳ ಟಿಸಿಲುಗಳನ್ನು ಹಾಕಿ ಮಣ್ಣಿನಿಂದ ಮುಚ್ಚುವ ಮೂಲಕ ಸಂಭವಿಸಲಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಸಕಾಲಿಕ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ.