ಬೆಂಗಳೂರು: ಮಂಗಳೂರಿನ ಜಿಆರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾದ 99 ಎಂಬಿಬಿಎಸ್ ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ರಾಜ್ಯದ ಇತರೆ ಖಾಸಗಿ ಕಾಲೇಜುಗಳಿಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರಿಗೆ (ಡಿಎಂಇ) ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ನಾವು, 2023-24ನೇ ಸಾಲಿನ ಎಂಬಿಬಿಎಸ್ ಕೋರ್ಸ್ ಗೆ ಪಡೆದಿರುವ ಪ್ರವೇಶಾತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗವು ಅಕ್ರಮ ಎಂದು ಸಾರಿದೆ. ಹೀಗಾಗಿ, ನಮ್ಮನ್ನು ಬೇರೊಂದು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಬೇಕು ಮತ್ತು ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಿ ಡಿ.ಎಸ್. ಧಾತ್ರಿ ಸೇರಿದಂತೆ ಕಾಲೇಜಿನ 99 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, “ಕೋಟಾದ ಪ್ರಕಾರ ಬೇರೊಂದು ಖಾಸಗಿ ಕಾಲೇಜಿನಲ್ಲಿ ಪ್ರವೇಶ ಕಲ್ಪಿಸಲಾಗುವುದು. ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ ಎಂದು ಕೋರಿದರು.
ವಿಚಾರಣೆ ವೇಳೆ ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ಅರ್ಜಿದಾರ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜಿಗೆ ದಾಖಲಿಸಿಕೊಳ್ಳಲಾಗಿದೆ. ಸರ್ಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿನ ಶುಲ್ಕ ಬಹಳ ವ್ಯತ್ಯಾಸವಾಗಿದೆ. ವಿದ್ಯಾರ್ಥಿಗಳು ಪ್ರವೇಶ ಪಡೆದಿರುವ ಕೋಟಾದ ಪ್ರಕಾರ ಬೇರೊಂದು ಖಾಸಗಿ ಕಾಲೇಜಿನಲ್ಲಿ ಪ್ರವೇಶಾತಿ ಕಲ್ಪಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 24 ಖಾಸಗಿ ಕಾಲೇಜುಗಳಿವೆ. ವಿದ್ಯಾರ್ಥಿಗಳಿಗೆ ಸೀಟು ಮರು ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶಬೇಕಿದೆ. 24 ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸೀಟು ಮರು ವಿತರಣೆ ಅಂತಿಮಗೊಳಿಸಿ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, “ವಿದ್ಯಾರ್ಥಿಗಳ ಸೀಟು ಮರು ವಿತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಮುಂದಿನ ವಿಚಾರಣೆಯ ಒಳಗೆ ವಿದ್ಯಾರ್ಥಿಗಳ ಹೆಸರು, ಅವರನ್ನು ತಾತ್ಕಾಲಿಕವಾಗಿ ಯಾವ ಕಾಲೇಜಿಗೆ ವರ್ಗಾಯಿಸಲಾಗುತ್ತದೆ ಎಂಬ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು” ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆಗೆ ನಿರ್ದೇಶಿಸಿತು. ಅಕ್ಟೋಬರ್ 3ಕ್ಕೆ ವಿಚಾರಣೆ ಮುಂದೂಡಲಾಗಿದೆ.