ಕೊಡಗು ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ: ವಿವಿಧ ಪದವಿಗಳನ್ನು ನೀಡಲು ಅನುಮತಿ

ಯುಜಿಸಿ ಪದವಿಗಳನ್ನು ನೀಡಲು ಕೊಡಗು ವಿಶ್ವವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ದಿಂದ ಅಧಿಕೃತ ಮಾನ್ಯತೆ ದೊರೆತಿದೆ. 2022-23 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದ ಕಳೆದ ಐದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ.

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (UGC) ತನ್ನ ಅಧಿನಿಯಮ 1956 ರ ಪ್ರಕರಣ 2 (ಎಫ್) ಅಡಿಯಲ್ಲಿ ಕೊಡಗು ವಿಶ್ವವಿದ್ಯಾಲಯಕ್ಕೆ ಮಾನ್ಯತೆಯನ್ನು 2023 ರ ಜುಲೈ 25 ರಂದು ನೀಡಿ ಪ್ರಕಟಣೆ ಹೊರಡಿಸಿದೆ. ಯುಜಿಸಿ ಮಾನ್ಯತೆ ಸಿಕ್ಕಿರುವುದರಿಂದ ಕೊಡಗು ವಿಶ್ವವಿದ್ಯಾಲಯವು ಯುಜಿಸಿ ಅಡಿಯಲ್ಲಿ ಬರುವ ವಿವಿಧ ಪದವಿಗಳನ್ನು ನೀಡಲು ಅಧಿಕೃತ ಮಾನ್ಯತೆಯನ್ನು ಪಡೆದಂತಾಗಿದೆ. ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಅಶೋಕ ಸಂ. ಆಲೂರ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.

ಕೊಡಗು ವಿಶ್ವವಿದ್ಯಾಲಯ ಸ್ಥಾಪನೆ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳಿರುವಂತೆ ಕೊಡಗಿಗೆ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆಂಬ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಡಗು ವಿಶ್ವವಿದ್ಯಾಲಯವು ಕಾರ್ಯರಂಭ ಮಾಡಬೇಕು ಎಂಬ ಬೇಡಿಕೆಯನ್ನು ಮನ್ನಿಸಿ. ಕರ್ನಾಟಕ ಸರ್ಕಾರವು 10.10.2022 ರಂದು ಬಜೆಟ್‌ನಲ್ಲಿ ನೂತನ ಏಳು ವಿಶ್ವವಿದ್ಯಾಲಯಗಳನ್ನು ಕೊಡಗು ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆ ಮಾಡಿತ್ತು.

ಅದರಂತೆಯೇ ಕರ್ನಾಟಕ ಸರ್ಕಾರವು 2022-23ನೇ ಸಾಲಿನಲ್ಲಿ ಕೊಡಗಿನಲ್ಲಿ ನೂತನವಾಗಿ ಕೊಡಗು ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಿ ದಿನಾಂಕ:28.03.2023 ರಂದು ಅದನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿತ್ತು. ಇದರ ಪ್ರಥಮ ಕುಲಪತಿಗಳಾಗಿ ಪ್ರೊ. ಅಶೋಕ ಸಂ. ಆಲೂರ ಅವರು 2023ರ ಮಾರ್ಚ್ 21 ರಂದು ಹಾಗೂ ಡಾ. ಸೀನಪ್ಪ ಅವರು ಮಾರ್ಚ್ 29 ರಂದು ಕುಲಸಚಿವರಾಗಿ (ಮೌಲ್ಯಮಾಪನ) ಅಧಿಕಾರ ವಹಿಸಿಕೊಂಡು ನಿರ್ವಹಿಸುತ್ತಿದ್ದಾರೆ. ಮುಂದುವರೆದು ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಸನ್ಮಾನ್ಯ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಕೊಡಗು ವಿಶ್ವವಿದ್ಯಾಲಯದ ವೆಬ್‌ಸೈಟ್ kuk.karnataka.gov.in ಅನ್ನು 2023 ಮೇ 05 ರಂದು ರಾಜಭವನದಲ್ಲಿ ಅನಾವರಣಗೊಳಿಸಿದ್ದರು.

ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿರುವ ಸಂಯೋಜಿತ ಮಹಾವಿದ್ಯಾಲಯಗಳು ಮತ್ತು ಘಟಕ ಮಹಾವಿದ್ಯಾಲಯದ ವತಿಯಿಂದ 2023-24 ನೇ ಶೈಕ್ಷಣಿಕ ಸಾಲಿನ ಪದವಿ ಪ್ರವೇಶಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭಗೊಡಿದೆ.

Latest Indian news

Popular Stories