ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ವರದಿಯಾದ ನೈತಿಕ ಪೊಲೀಸ್‌ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೂ ಯುವತಿಯನ್ನು ತಮ್ಮ ವಾಹನದಲ್ಲಿ ಕರೆದೊಯ್ಯುತ್ತಿದ್ದ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತರು ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಧರ್ಮಸ್ಥಳದ ಅವಿನಾಶ್ (26), ಸಂದೀಪ್ (20) ಮತ್ತು ಉಪ್ಪಿನಂಗಡಿಯ ಅಕ್ಷತ್ (22) ಎಂದು ಗುರುತಿಸಲಾಗಿದೆ.
ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.
ಆಗಸ್ಟ್ 2 ರಂದು ರಾತ್ರಿ 9 ಗಂಟೆ ಸುಮಾರಿಗೆ ಚಾಲಕ ಮೊಹಮ್ಮದ್ ಆಶಿಕ್ (22) ಹಿಂದೂ ಯುವತಿಯನ್ನು ಬಸ್ ನಿಲ್ದಾಣಕ್ಕೆ ಇಳಿಸಿದ ಬಳಿಕ ಘಟನೆ ಸಂಭವಿಸಿದೆ.
ಉಜಿರೆಯ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿ ಸಮೀಪದ ಬಸ್ ಸ್ಟ್ಯಾಂಡ್‌ಗೆ ಹೋಗಲು ಆಟೋ ರಿಕ್ಷಾಗೆ ಹತ್ತಿದ್ದರು. ಯುವತಿಯನ್ನು ಡ್ರಾಪ್ ಮಾಡಿ ಹಿಂತಿರುಗುತ್ತಿದ್ದಾಗ ಚಾಲಕನ ಮೇಲೆ ನಾಲ್ವರು ವ್ಯಕ್ತಿಗಳು ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ನಿವಾಸಿಯಾಗಿರುವ ಆಶಿಕ್, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.