ಬೆಂಗಳೂರು: ಮುಂಗಾರು ಅವಧಿಯಲ್ಲಿ ರಾಜ್ಯ ಮಳೆಯಿಲ್ಲದೇ ಬರ ಪರಿಸ್ಥಿತಿ ಎದುರಿಸಿದ್ದು, ಕೃಷಿ ಮತ್ತು ಕಂದಾಯ ಇಲಾಖೆಗಳ ಜಂಟಿ ಸಮೀಕ್ಷೆಯ ನಂತರ ರಾಜ್ಯದ 134 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗುವುದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಸಂಪುಟ ಉಪಸಮಿತಿಯ ಸಭೆ ಬಳಿಕ ಮಾತನಾಡಿದ ಅವರು, ಇಂದು ನೈಸರ್ಗಿಕ ವಿಕೋಪಗಳಿಗೆ ತೀರ್ಮಾನ ತೆಗೆದುಕೊಳ್ಳುವ ಸಂಪುಟ ಉಪ ಸಮಿತಿ ಸಭೆ ಮಾಡಿದೆವು. ಇನ್ನೂ 63 ತಾಲೂಕಿನಲ್ಲಿ ಮತ್ತೆ ಬೆಳೆ ಸಮೀಕ್ಷೆ ಮಾಡಲು ತೀರ್ಮಾನ ಮಾಡಿದ್ದೇವೆ. ಕೇಂದ್ರ ಸರ್ಕಾರದ ಕಡ್ಡಾಯ ಅವಶ್ಯಕತೆ ಪ್ರಕಾರ 63 ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾಗುತ್ತದೆ. ಸಮೀಕ್ಷೆ ಆದ ಬಳಿಕ ಬರ ಘೋಷಣೆ ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಹಾವೇರಿಯಲ್ಲಿ ಕಾಂಗ್ರೆಸ್ ಶಾಸಕರ ಅನುದಾನದಲ್ಲಿ ಮೋಡ ಬಿತ್ತನೆ ಕಾರ್ಯ!
ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರ ಆತಂಕವನ್ನು ನಿವಾರಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಶಾಸಕ ಪ್ರಕಾಶ್ ಕೆ ಕೋಳಿವಾಡ್ ಮೋಡ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು. ಇನ್ನೆರಡು ದಿನ ಮೋಡ ಬಿತ್ತನೆ ನಡೆಯಲಿದೆ ಎಂದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದ ವಿಮಾನ ಹಾವೇರಿ ಜಿಲ್ಲೆಯತ್ತ ಸಾಗಿ ಅಲ್ಲಿ ತಾಲೀಮು ನಡೆಸಲಾಯಿತು. ಮೋಡ ಬಿತ್ತನೆ ಮಾಡಿದರೆ ಬರಗಾಲದ ಪರಿಸ್ಥಿತಿ ದೂರವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಪಿಕೆಕೆ ಲಿಮಿಟೆಡ್ ಈ ಹಿಂದೆಯೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ನಡೆಸಿದೆ. ಕೋಳಿವಾಡ್ ಈ ಹಿಂದೆ ಸಂಸ್ಥೆಯ ಪ್ರವರ್ತಕರಾಗಿದ್ದರು.