ನೇಪಾಳವನ್ನು ಮಣಿಸಿ ಏಷ್ಯಾಕಪ್‌ನ ಸೂಪರ್-4ಗೆ ಲಗ್ಗೆ ಇಟ್ಟ ಭಾರತ!

ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಏಷ್ಯಾ ಕಪ್ 2023ಗೆ ಸೂಪರ್-4ಗೆ ಲಗ್ಗೆ ಇಟ್ಟಿದೆ. 

ಪಾಕಿಸ್ತಾನದ ನಂತರ ಭಾರತ ತಂಡ ಕೂಡ ಎ ಗುಂಪಿನಿಂದ ಅರ್ಹತೆ ಪಡೆದಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಇಂದು ನೇಪಾಳ ವಿರುದ್ಧ ಏಷ್ಯಾಕಪ್‌ನಲ್ಲಿ ತನ್ನ ಎರಡನೇ ಪಂದ್ಯವನ್ನು ಆಡಿ ಗೆಲುವು ಸಾಧಿಸಿದೆ. 

ಈ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳಿಂದ ಗೆದ್ದು ಸೂಪರ್-4 ಪ್ರವೇಶಿಸಿದೆ. ಇದರೊಂದಿಗೆ ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಎರಡನೇ ಪಂದ್ಯವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಲಿದ್ದಾರೆ. ಈ ಪಂದ್ಯ ಸೆಪ್ಟೆಂಬರ್ 10ರಂದು ಹಂಬಂಟೋಟದಲ್ಲಿ ನಡೆಯಲಿದೆ. ಆದರೆ ಪಂದ್ಯಾವಳಿಯ ಅಂತಿಮ ಪಂದ್ಯವು ಸೆಪ್ಟೆಂಬರ್ 17ರಂದು ಹಂಬಂಟೋಟಾದಲ್ಲಿ ನಡೆಯಲಿದೆ.

ಭಾರತಕ್ಕೆ 231 ರನ್ ಟಾರ್ಗೆಟ್ ನೀಡಿದ್ದ ನೇಪಾಳ
ಭಾರತ ತಂಡ ಮತ್ತು ನೇಪಾಳ ನಡುವಿನ ಈ ಪಂದ್ಯವು ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡ 230 ರನ್ ಗಳಿಸಿತು. ತಂಡದ ಪರ ಆಸಿಫ್ ಶೇಖ್ ಬಿರುಸಿನ ಅರ್ಧಶತಕ ಬಾರಿಸಿದ್ದು 58 ರನ್ ಗಳಿಸಿದರು. ಸೋಂಪಾಲ್ ಕಾಮಿ 48 ರನ್‌ಗಳ ಇನಿಂಗ್ಸ್‌ ಆಡಿದರು. ಭಾರತ ತಂಡದ ಪರ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ರವೀಂದ್ರ ಜಡೇಜಾ ತಲಾ 3 ವಿಕೆಟ್ ಪಡೆದರು. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ಮತ್ತು ಶಾರ್ದೂಲ್ ಠಾಕೂರ್ ತಲಾ 1 ಯಶಸ್ಸು ಗಳಿಸಿದರು.

ಡಕ್‌ವರ್ತ್‌ ಲೂಯಿಸ್‌ ವಿಧಾನದಲ್ಲಿ ಭಾರತ 145 ರನ್‌ಗಳ ಗುರಿ ಮುಟ್ಟಿತು
231 ರನ್ ಗಳ ಗುರಿ ಬೆನ್ನತ್ತಿದ ಭಾರತ ತಂಡ 2.1 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಲಷ್ಟೇ ಶಕ್ತವಾಗಿದ್ದು, ನಂತರ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಮಳೆಯಿಂದಾಗಿ ಸಾಕಷ್ಟು ಸಮಯ ವ್ಯರ್ಥವಾಯಿತು. ನಂತರ ಡಕ್ವರ್ತ್ ಲೂಯಿಸ್ ನಿಯಮ ಬಳಸಿ ಭಾರತಕ್ಕೆ 23 ಓವರ್ ಗಳಲ್ಲಿ 145 ರನ್ ಗಳ ಗುರಿ ನೀಡಲಾಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ 20.1 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 147 ರನ್ ಗಳಿಸಿ ಜಯ ಸಾಧಿಸಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅರ್ಧಶತಕ ಬಾರಿಸಿದರು. ಅವರು ಪಂದ್ಯದಲ್ಲಿ 59 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರು. ಶುಭಮನ್ ಗಿಲ್ ಕೂಡ 62 ಎಸೆತಗಳಲ್ಲಿ 67 ರನ್ ಗಳಿಸಿ ಅಜೇಯರಾಗಿ ಉಳಿದರು.

ಭಾರತ-ಪಾಕಿಸ್ತಾನ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು
ಏಷ್ಯಾ ಕಪ್ 2023ರಲ್ಲಿ ಭಾರತ ತಂಡ ಶನಿವಾರ (ಸೆಪ್ಟೆಂಬರ್ 2) ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಿತು. ಆದರೆ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಕೆಟ್ಟ ಆರಂಭವನ್ನು ಪಡೆದಿತ್ತು. ಆದರೆ ತಂಡವು 266 ರನ್ ಗಳಿಸಿತು. ಇಶಾನ್ 81 ಎಸೆತಗಳಲ್ಲಿ 82 ರನ್ ಗಳಿಸಿದರು. ಆದರೆ ವೇಗದ ಬೌಲಿಂಗ್ ಆಲ್ ರೌಂಡರ್ ಪಾಂಡ್ಯ 90 ಎಸೆತಗಳಲ್ಲಿ 87 ರನ್ ಗಳಿಸಿದರು. ಇದಾದ ನಂತರ ಭಾರೀ ಮಳೆ ಸುರಿದು ಪಾಕಿಸ್ತಾನ ತಂಡ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಪಂದ್ಯವನ್ನು ರದ್ದುಗೊಳಿಸಬೇಕಾಯಿತು.

Latest Indian news

Popular Stories