ಕುಂದಾಪುರ: ಹಳ್ಳಿ ಮನೆ ಹೋಟೆಲ್ ಕ್ಯಾಶಿಯರ್ ಕೆರೆಗೆ ಬಿದ್ದು ಮೃತ್ಯು

ತೆಕ್ಕಟ್ಟೆ: ನಿರಂತರವಾಗಿ ಸುರಿದ ಧಾರಾಕಾರ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್‌ ಮಲ್ಯಾಡಿ ಗ್ರಾಮದ ನಿವಾಸಿ ದಿನಕರ ಶೆಟ್ಟಿ (46) ಆಕಸ್ಮಿಕವಾಗಿ ಕೆರೆಗೆ ಜಾರಿಬಿದ್ದು, ದಾರುಣವಾಗಿ ಸಾವಿಗೀಡಾದ ಘಟನೆ ಜು.4 ರ ತಡರಾತ್ರಿ 11.30ರ ಸುಮಾರಿಗೆ ಸಂಭವಿಸಿದೆ.

ತೆಕ್ಕಟ್ಟೆ ಸಮೀಪದ ಮಣೂರಿನ ಹಳ್ಳಿಮನೆ ಹೋಟೆಲ್‌ ನಲ್ಲಿ ಕ್ಯಾಶಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿನಕರ ಶೆಟ್ಟಿ (46) ಅವರು ಎಂದಿನಿಂದ ಕೆಲಸ ಮುಗಿಸಿ ತನ್ನ ಮ್ಯಾಸ್ಟ್ರೊ ವಾಹನದ ಮೂಲಕ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಮನೆಯ ಅನತಿ ದೂರದಲ್ಲಿರುವ ದೇವರ ಕೆರೆಗೆ ಆಕಸ್ಮಿಕವಾಗಿ ವಾಹನ ಸಹಿತ ಆಯಾತಪ್ಪಿ ಬಿದ್ದಿದ್ದಾರೆ ಎಂದು ಹೇಳಲಾಗಿದೆ.

ಇದೇ ಸಂದರ್ಭದಲ್ಲಿ ಪತ್ನಿ ಶೀಲಾ ಶೆಟ್ಟಿ ಅವರು ತನ್ನ ಗಂಡ ತಡರಾತ್ರಿಯಾದರೂ ಕೂಡಾ ಮನೆಗೆ ಬಾರದೇ ಇರುವ ಬಗ್ಗೆ ಅನುಮಾನಗೊಂಡು, ಪರಿಸರದವರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ತತ್‌ಕ್ಷಣವೇ ಕೋಟ ಪೊಲೀಸ್‌ ಹಾಗೂ ಅಗ್ನಿಶಾಮಕ ಸಿಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ, ಕೆರೆಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆನೀರು ಸಂಗ್ರಹವಾಗಿರುವ ಪರಿಣಾಮ ರಕ್ಷಣಾ ಕಾರ್ಯಕ್ಕೆ ಮಲ್ಪೆಯ ಈಶ್ವರ್‌ , ಜೀವನ ಮಿತ್ರದ ನಾಗರಾಜ್‌ ಹಾಗೂ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು.

Latest Indian news

Popular Stories