ಮಣಿಪುರ ಅತ್ಯಾಚಾರ ಪ್ರಕರಣ: ಬಂಧಿತರನ್ನು ಮುಂದೊಂದು ದಿನ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿದರೂ ಅಚ್ಚರಿಯಿಲ್ಲ – ಲಬೀದ್ ಶಾಫಿ ಆಕ್ರೋಶ

ಮಣಿಪುರದ ಮಹಿಳೆಯರನ್ನು ಬೆತ್ತಲೆಯಾಗಿ ಪರೇಡ್ ಮಾಡಿ ಅತ್ಯಾಚಾರ ಎಸಗಿರುವ ಘಟನೆ ಅಮಾನವೀಯ, ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಕೃತ್ಯ ಎಂದು ಸಾಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯಾಧ್ಯಕ್ಷ ಲಬೀದ್ ಶಾಫಿ ವಿಷಾದ ವ್ಯಕ್ತಪಡಿಸಿದ್ದಾರೆ.

ಆ ಕುಕ್ಕಿ ಬುಡಕಟ್ಟು ಸಮುದಾಯದ ಹೆಣ್ಣು ಮಕ್ಕಳಿಗೆ ಆಗಿರುವ ಅವಮಾನ, ನೋವು ಮಾನಸಿಕ ಆಘಾತವನ್ನು ಊಹಿಸಲೂ ಸಾಧ್ಯವಿಲ್ಲ. ಈ ಕೃತ್ಯ ಗುಜರಾತ್, ಕೈರ್ಲಾಂಜಿ, ಹತ್ರಾಸ್, ಕುನನ್ ಪೋಶ್ಪೋರ ಮುಂತಾದ ಹೇಯ ಘಟನೆಗಳ ಮುಂದುವರಿದ ಭಾಗವಾಗಿದೆ. ಅತ್ಯಾಚಾರವನ್ನು ರಾಜಕೀಯವಾಗಿ ಬಳಸಬಹುದು ಎಂಬ ವಿಚಾರಧಾರೆಯಿಂದ ಇದಕ್ಕಿಂತ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಈ ರಾಕ್ಷಸರನ್ನು ಬಂಧಿಸಿದರೆ ಮುಂದೊಂದು ದಿನ ಸನ್ನಡತೆಯ ಆಧಾರದಲ್ಲಿ ಬಿಡುಗಡೆ ಮಾಡಿದರೂ ಅಚ್ಚರಿಯಿಲ್ಲ.

ಎರಡು ತಿಂಗಳ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈಗ ಪ್ರಧಾನಿ ಮೋದಿಯವರು ಈ ಘಟನೆಯನ್ನು ಖಂಡಿಸಿ ಹೇಳಿಕೆ ಕೊಟ್ಟಿದ್ದಾರೆ. ಮಣಿಪುರ ಕಳೆದೆರಡು ತಿಂಗಳು ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವಾಗ ಪ್ರಧಾನಿಯ ಗಾಢ ಮೌನವೇ ಈ ಪರಿಸ್ಥಿತಿಗೆ ಕಾರಣ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗದಿರುತ್ತಿದ್ದರೆ ಪ್ರಧಾನಿ ಈಗಲೂ ತಮ್ಮ ಜಾಣ ಮೌನವನ್ನು ಮುಂದುವರಿಸುತ್ತಿದ್ದರು. ಇಂಥಹ ಮೃಗೀಯ ಕೃತ್ಯವನ್ನು ಎಸಗಿ, ಹೆಮ್ಮೆಯಿಂದ ವೀಡಿಯೋ ಮಾಡಿರುವ ಧೈರ್ಯ ಮತ್ತು ಆ ಮನಸ್ಥಿತಿ ಭಾರತದಲ್ಲಿ ಮುಂದುವರಿಯುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಈ ಗೂಂಡಾಗಳಿಗೆ ಆ ಧೈರ್ಯವನ್ನು ಕೊಟ್ಟವರಾರು? ನಾಗರೀಕ ಸಮಾಜ ಈ ಕೃತ್ಯಕ್ಕೆ ತಲೆ ತಗ್ಗಿಸುವುದಲ್ಲ, ತಲೆ ಎತ್ತಿ ಸರಕಾರವನ್ನು ಪ್ರಶ್ನಿಸಬೇಕು ಎಂದು ಲಬೀದ್ ಶಾಫಿ ಹೇಳಿದ್ದಾರೆ.

Latest Indian news

Popular Stories