ಟ್ರಿಪೋಲಿ: ಲಿಬಿಯಾದ ಪೂರ್ವ ಭಾಗಗಳಲ್ಲಿ ಭೀಕರ ಪ್ರವಾಹ ಆವರಿಸಿದ್ದು, ಸುಮಾರು 20,000 ಜನರು ಪ್ರಾಣಕಳೆದುಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸೌದಿ ಅರೇಬಿಯಾದ ಸುದ್ದಿ ಸಂಸ್ಥೆ ಅಲ್ ಅರೇಬಿಯಾದೊಂದಿಗೆ ಮಾತನಾಡಿದ ಬಂದರು ನಗರ ಡರ್ನಾ ಮೇಯರ್, ಎರಡು ಅಣೆಕಟ್ಟುಗಳು ಒಡೆದು 18,000 ರಿಂದ 20,000 ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಿದ್ದಾರೆ. ಸುನಾಮಿಯಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿತು ಮತ್ತು ಜನರು ಮಲಗಿದ್ದ ವೇಳೆ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಡೇನಿಯಲ್ ಚಂಡಮಾರುತದಿಂದ ಉಂಟಾದ ಭಾರೀ ಮಳೆಯಿಂದಾಗಿ ಎರಡು ಅಣೆಕಟ್ಟುಗಳ ಒಡೆದು ಉಂಟಾದ ಪ್ರವಾಹದಿಂದ ಜನ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 100,000 ಕ್ಕೂ ಹೆಚ್ಚು ಜನರು ವಾಸಿಸುವ ಡರ್ನಾ ಅತ್ಯಂತ ಕೆಟ್ಟ ಪೀಡಿತ ನಗರವಾಗಿದೆ. ಬಿಬಿಸಿಯ ವರದಿಯ ಪ್ರಕಾರ ಅವಶೇಷಗಳಡಿಯಲ್ಲಿ ಅಥವಾ ಸಮುದ್ರದಲ್ಲಿ ಪತ್ತೆಯಾಗದ ದೇಹಗಳು ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಬಿಕ್ಕಟ್ಟನ್ನು ತಗ್ಗಿಸಲು ಲಿಬಿಯಾ ಅಂತಾರಾಷ್ಟ್ರೀಯ ನೆರವು ಕೋರಿದೆ.
ಸಂಘರ್ಷದಿಂದ ನಲುಗಿರುವ ರಾಷ್ಟ್ರದಲ್ಲಿ ರಕ್ಷಣಾ ಚಟುವಟಿಕೆಗಳನ್ನು ನಡೆಸುತ್ತಿರುವ ಟರ್ಕಿಶ್ ರೆಡ್ ಕ್ರೆಸೆಂಟ್, ಹಾನಿಯು ಬಂದರು ನಗರ ಭೂಕಂಪದ ಹೊಡೆತಕ್ಕೆ ಸಿಲುಕಿದಂತೆ ತೋರುತ್ತಿದೆ ಎಂದು ಹೇಳಿದೆ. ಈಜಿಪ್ಟ್, ಟರ್ಕಿ ಮತ್ತು ಕತಾರ್‌ನಿಂದ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯವನ್ನು ಮುಂದುವರೆಸಿದ್ದಾರೆ.