ಲೋಕಸಭೆ ಚುನಾವಣೆಗೆ SP ಮೊದಲ ಪಟ್ಟಿ; ಡಿಂಪಲ್ ಯಾದವ್ ಸೇರಿದಂತೆ 16 ಅಭ್ಯರ್ಥಿಗಳ ಹೆಸರು ಪ್ರಕಟ

ಲಖನೌ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲೇ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಪಿ 16 ಅಭ್ಯರ್ಥಿಗಳನ್ನು ಘೋಷಿಸಿದ್ದು ಯಾದವ್ ಕುಟುಂಬದ ಡಿಂಪಲ್ ಯಾದವ್, ಧರ್ಮೇಂದ್ರ ಯಾದವ್, ಅಕ್ಷಯ್ ಯಾದವ್ ಹೆಸರು ಕೂಡ ಪಟ್ಟಿಯಲ್ಲಿದೆ.

ಇದುವರೆಗೂ ಬಿಜೆಪಿ ಸೇರಿದಂತೆ ಯಾರೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಸಂಭಾಲ್‌ನಿಂದ ಶಫೀಕರ್ ರೆಹಮಾನ್ ಬುರ್ಕೆ ಮತ್ತೆ ಕಣಕ್ಕಿಳಿದಿದ್ದಾರೆ. ಫಿರೋಜಾಬಾದ್‌ನಿಂದ ಅಕ್ಷಯ್ ಯಾದವ್, ಮೈನ್‌ಪುರಿಯಿಂದ ಡಿಂಪಲ್ ಯಾದವ್, ಇಟಾಹ್‌ನಿಂದ ದೇವೇಶ್ ಯಾದವ್, ಬದೌನ್‌ನಿಂದ ಧರ್ಮೇಂದ್ರ ಯಾದವ್, ಖೇರಿಯಿಂದ ಉತ್ಕರ್ಷ್ ವರ್ಮಾ, ಧೌರಾಹರಾದಿಂದ ಆನಂದ್ ಭದೌರಿಯಾ, ಉನ್ನಾವೊದಿಂದ ಶ್ರೀಮತಿ ಅಣ್ಣು ಟಂಡನ್ ಕಣಕ್ಕಿಳಿದಿದ್ದಾರೆ.

ಇದಲ್ಲದೆ, ಲಖನೌದಿಂದ ರವಿದಾಸ್ ಮೆಹ್ರೋತ್ರಾ ಮತ್ತು ಫರೂಕಾಬಾದ್‌ನಿಂದ ಡಾ. ನವಲ್ ಕಿಶೋರ್ ಶಾಕ್ಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಅಕ್ಬರ್‌ಪುರದಿಂದ ರಾಜರಾಮ್ ಪಾಲ್, ಬಂದಾದಿಂದ ಶಿವಶಂಕರ್ ಸಿಂಗ್ ಪಟೇಲ್, ಫೈಜಾಬಾದ್‌ನಿಂದ ಅವಧೇಶ್ ಪ್ರಸಾದ್, ಅಂಬೇಡ್ಕರ್ ನಗರದಿಂದ ಲಾಲ್ಜಿ ವರ್ಮಾ, ಬಸ್ತಿಯಿಂದ ರಾಮಪ್ರಸಾದ್ ಚೌಧರಿ ಮತ್ತು ಗೋರಖ್‌ಪುರದಿಂದ ಕಾಜಲ್ ನಿಶಾದ್ ಅವರನ್ನು ಕಣಕ್ಕಿಳಿಸಲಾಗಿದೆ. ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಎಸ್‌ಪಿ ಪಟ್ಟಿ ಬಿಡುಗಡೆ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಎಲ್‌ಡಿ ಮೈತ್ರಿಯೊಂದಿಗೆ ಸ್ಪರ್ಧಿಸಲು ಎಸ್‌ಪಿ ನಿರ್ಧರಿಸಿದೆ. ಉತ್ತರಪ್ರದೇಶದ 80ರಲ್ಲಿ 60 ಸ್ಥಾನಗಳಲ್ಲಿ ಸ್ಪರ್ಧಿಸಲು ಎಸ್‌ಪಿ ನಿರ್ಧರಿಸಿದೆ. ಜಯಂತ್ ಚೌಧರಿ ಅವರ ಆರ್‌ಎಲ್‌ಡಿಗೆ ಏಳು ಸ್ಥಾನಗಳನ್ನು ನೀಡಲಾಗಿದೆ. ಎಸ್‌ಪಿ 11 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿದೆ. ಆದರೆ, ಕಾಂಗ್ರೆಸ್ ಈ ಸ್ಥಾನಗಳನ್ನು ನಿರಾಕರಿಸಿಲ್ಲ ಅಥವಾ ಯಾವುದೇ ಮೈತ್ರಿ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಹೀಗಿರುವಾಗ ಎಸ್‌ಪಿ ಮತ್ತು ಕಾಂಗ್ರೆಸ್‌ ಮೈತ್ರಿ ಬಗ್ಗೆ ಗೊಂದಲ ಉಂಟಾಗಿದೆ.

Latest Indian news

Popular Stories